ರಾಮದುರ್ಗ: ‘ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಹಣ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿಲ್ಲ. ಭ್ರಷ್ಟ ಸರ್ಕಾರ ಕಿತ್ತೊಗೆಯಲು ಕಾರ್ಯಕರ್ತರು ಪಣತೊಡಬೇಕು’ ಎಂದು ಬಿಜೆಪಿ ಮುಖಂಡ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಮದುರ್ಗ ಮಂಡಳದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮ, ಮೂಡ ಹಗರಣ ಖಂಡಿಸಿ ಆಗಸ್ಟ್ 3ರಿಂದ ಬೆಂಗಳೂರಿನಿಂದ ಮೈಸೂರಿಗೆ ನಡೆಯುವ ಪ್ರತಿಭಟನಾ ಪಾದಯಾತ್ರೆಯಲ್ಲಿ ತಾಲ್ಲೂಕಿನ ಕಾರ್ಯಕರ್ತರು ಪಾಲ್ಗೊಳ್ಳಬೇಕು. ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡದಿದ್ದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದರು.
ಪಕ್ಷದ ರಾಜ್ಯ ವಕ್ತಾರ ಎಫ್.ಎಸ್. ಸಿದ್ಧನಗೌಡ್ರ ಮಾತನಾಡಿ, ‘ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಹಂತದ ಸುಮಾರು 4 ಸಾವಿರ ಪದಾಧಿಕಾರಿಗಳಿದ್ದು, ಕಾರ್ಯಕಾರಿಣಿಗೆ 150ರಿಂದ 900 ಸದಸ್ಯರನ್ನು ಮಾತ್ರ ಆಮಂತ್ರಿಸಲಾಗುತ್ತಿದೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಶ್ರಮಿಸಬೇಕು’ ಎಂದು ಹೇಳಿದರು.
ಬಿಜೆಪಿ ಮಂಡಳದ ಅಧ್ಯಕ್ಷ ರಾಜೇಶ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ. ವಿ. ಪಾಟೀಲ, ವಿಜಯ ಗುಡದಾರಿ, ಕಾರ್ಯದರ್ಶಿ ಉಮೇಶ ಹಕಾಟಿ, ಶಂಕರ ಹುರಕಡ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.