ADVERTISEMENT

ಕನ್ನಡ-ಮರಾಠಿ ಬಾಂಧವ್ಯ ವಿಸ್ತಾರಗೊಳ್ಳಲಿ: ನಿವೃತ್ತ ಉಪನ್ಯಾಸಕ ಡಾ.ಎ.ಬಿ. ಘಾಟಗೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 14:19 IST
Last Updated 30 ಜನವರಿ 2021, 14:19 IST

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ‘ಗಡಿ ಭಾಗದಲ್ಲಿ ಭಾಷೆಗಳು ಭಿನ್ನವಾದರೂ ಭಾವನೆಗಳು ಒಂದಾಗಿವೆ. ಕನ್ನಡ-ಮರಾಠಿ ಬಾಂಧವ್ಯ ನಿರಂತರವಾಗಿ ವಿಸ್ತಾರಗೊಳ್ಳುತ್ತ ಬೆಳೆಯಬೇಕು’ ಎಂದು ನಿವೃತ್ತ ಉಪನ್ಯಾಸಕ ಡಾ.ಎ.ಬಿ. ಘಾಟಗೆ ಆಶಿಸಿದರು.

ಕಸಾಪ ಜಿಲ್ಲಾ ಘಟಕದಿಂದ ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಗಡಿನಾಡ ಚಿಂತನೆ’ ಕುರಿತ ಗೋಷ್ಠಿಯಲ್ಲಿ ‘ಕನ್ನಡ ಮರಾಠಿ ಭಾಷಾ ಬಾಂಧವ್ಯ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಕನಡ-ಮರಾಠಿ ಭಾಷೆಗಳ ಮಧ್ಯೆ ಐತಿಹಾಸಿಕ, ಭಾಷಿಕ, ಧಾರ್ಮಿಕ, ಸಾಹಿತ್ಯಿಕ ಬಾಂಧವ್ಯ ಒಳಗೊಂಡಿದೆ. ನುಡಿಗಳು, ಗುಡಿಗಳು, ನಡೆಗಳು ನಾಡಿನ ಜನರ ಬದುಕಿನ ನಾಡಿಗಳಗಾಗಿವೆ. ಸಂತಸದ ಬೀಡುಗಳಾಗಿವೆ. ಕನ್ನಡ ನೆಲದ ಶಿವಾಜಿ ಮಹಾರಾಜರು, ವಿಠ್ಠಲ, ಜ್ಞಾನೇಶ್ವರನನ್ನು ಮಹಾರಾಷ್ಟ್ರದಲ್ಲಿ ಭಕ್ತಿಯಿಂದ ಆರಾಧಿಸುತ್ತಾರೆ. ಕೊಡು-ಕೊಳ್ಳುವಿಕೆ ಪ್ರಕ್ರಿಯೆ ಉಭಯ ರಾಜ್ಯಗಳಲ್ಲಿ ವಿಸ್ತಾರಗೊಳ್ಳುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಗಡಿ ಭಾಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ’ ಕುರಿತು ಸಾಹಿತಿ ಡಾ.ಸಂತೋಷ ಹಾನಗಲ್ ಮಾತನಾಡಿ, ‘ಮಹಾರಾಷ್ಟ್ರದವರ ಉದ್ದಟತನದ ಹೇಳಿಕೆಗೆ ಪ್ರತಿಕ್ರಿಯಿಸದೆ ವಿವೇಕದಿಂದ ನಡೆದುಕೊಳ್ಳಬೇಕು. ಮಹಾಜನ್ ವರದಿ ಆಯೋಗ ವರದಿ ಈಗಿನ ಸ್ಥಿತಿಯಲ್ಲಿ ಅಪ್ರಸ್ತುತವಾಗಿದೆ. ಗಡಿ ಉಸ್ತುವಾರಿ ಸಚಿವರೆ ನಮ್ಮಲ್ಲಿ ಇಲ್ಲ. ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಸಚಿವರಾಗಿದ್ದಾರೆ. ಸುವರ್ಣ ವಿಧಾನಸೌಧಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.

ಆಶಯ ನುಡಿಗಳನ್ನಾಡಿದ ಕಸಾಪ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ದೇಶಪಾಂಡೆ, ‘ಗಡಿ ಭಾಗದಲ್ಲಿ ಮರಾಠಿಯೊಂದಿಗೆ ಕನ್ನಡ ಉಳಿಸುವ ಕೆಲಸ ನಡೆದಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕನ್ನಡ-ಮರಾಠಿಗರ ಮಧ್ಯೆ ಭಾಷಾ ಬಾಂಧವ್ಯಕ್ಕೆ, ಗಡಿಯಲ್ಲಿ ನಡೆಯುತ್ತಿರುವ ಈ ಕನ್ನಡ ಸಮ್ಮೇಳನ ಕೈಗನ್ನಡಿಯಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಚ್.ಐ. ತಿಮ್ಮಾಪುರ ಮಾತನಾಡಿದರು.

ರವೀಂದ್ರ ಬಡಿಗೇರ, ಶೋಭಾ ದೇಶಿಂಗೆ ನಿರೂಪಿಸಿದರು. ಸಿದ್ರಾಮ ದ್ಯಾಗಾನಟ್ಟಿ ಸ್ವಾಗತಿಸಿದರು. ಸಂಜಯ ಕುರಣೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.