ADVERTISEMENT

ಬೆಳಗಾವಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ತಾಕೀತು

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:31 IST
Last Updated 7 ನವೆಂಬರ್ 2020, 15:31 IST
ಬೆಳಗಾವಿಯಲ್ಲಿ ಶನಿವಾರ ನಡೆದ ಕನ್ನಡ ಅನುಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಕನ್ನಡ ಅನುಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿದರು   

ಬೆಳಗಾವಿ: ‘ಅಂಗಡಿಗಳ ಮುಂದೆ ಕನ್ನಡ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಾಕೀತು ಮಾಡಿದರು.

ಇಲ್ಲಿ ಶನಿವಾರ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸುವಂತೆ ನ. 30ರ ಒಳಗೆ ಅಳವಡಿಸಲು ಮತ್ತೊಮ್ಮೆ ಸುತ್ತೋಲೆ ನೀಡಲಾಗುವುದು’ ಎಂದರು.

ADVERTISEMENT

ಸಮೀಕ್ಷೆ:‘ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು, ಫಲಕಗಳಲ್ಲಿ ನಿಯಮಾವಳಿ ಪ್ರಕಾರ ಕನ್ನಡ ಬಳಕೆ ಮಾಡದ ಮಳಿಗೆಗಳಿಗೆ ತಕ್ಷಣ ನೋಟಿಸ್ ಜಾರಿಗೊಳಿಸಬೇಕು. ಕನ್ನಡ ಫಲಕ ಅಳವಡಿಕೆಗೆ ಕ್ರಮ ವಹಿಸಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಮರಾಠಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದ್ದರೆ ಬೇರೆ ಶಾಲೆಯ ಶಿಕ್ಷಕರನ್ನು ನಿಯೋಜನೆ ಮೇರೆಗೆ ವ್ಯವಸ್ಥೆ ಮಾಡಬೇಕು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕನ್ನಡ ಕಲಿಯಲಿ:‘ಮನೆಯ ಭಾಷೆ ಮರಾಠಿಯಾಗಿದ್ದರೂ ಪರವಾಗಿಲ್ಲ. ಆದರೆ, ಅಂಗನವಾಡಿಗಳಲ್ಲಿ ಕನ್ನಡ ಕಲಿಸುವ ಪ್ರಯತ್ನವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು’ ಎಂದು ಸಲಹೆ ನೀಡಿದರು.

‘ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು. ಒಂದು ವೇಳೆ ಯಾರಾದರೂ ಪದೆ ಪದೇ ಗೈರು ಹಾಜರಾದರೆ ಅಂಥವರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಹೊಸದಾಗಿ ವ್ಯಾಪಾರ ಪರವಾನಗಿ ನೀಡುವಾಗ ಮತ್ತು ನವೀಕರಣ ವೇಳೆ, ಫಲಕದಲ್ಲಿ ಕನ್ನಡ ಇರುವುದನ್ನು ಕಡ್ಡಾಯವಾಗಿ ತೋರಿಸಿದಾಗ ಮಾತ್ರ ಪರವಾನಗಿ ಕೊಡಲಾಗುವುದು. ಪಾಲಿಕೆಯ ಎಲ್ಲ ಜಾಹೀರಾತು ಫಲಕಗಳಲ್ಲೂ ಕನ್ನಡ ಬಳಸಲಾಗುತ್ತಿದೆ. ಉದ್ಯಾನಗಳ ಸೂಚನಾ ಫಲಕಗಳನ್ನು ಕನ್ನಡದಲ್ಲೇ ಹಾಕಲಾಗಿದೆ’ ಎಂದು ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಿರ್ವಹಿಸಿದರು. ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಕುಂಟುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನ.2ರಂದು ವಿಶೇಷ ವರದಿ ಪ್ರಕಟವಾಗಿತ್ತು.

‘ಕನ್ನಡದಲ್ಲಿ ಮುದ್ರಣಕ್ಕೆ ಕ್ರಮ’

ಡಿಸಿಪಿ ವಿಕ್ರಮ್ ಆಮಟೆ, ‘ಇಲಾಖೆಯ ನೋಟಿಸ್‌ಗಳನ್ನು ಈಗ ಕನ್ನಡದಲ್ಲಿ ನೀಡಲಾಗುತ್ತಿದೆ. ದೂರನ್ನೂ ಕನ್ನಡದಲ್ಲಿ ಪಡೆಯಲಾಗುತ್ತಿದೆ. ದೋಷಾರೋಪಣಾ ಪಟ್ಟಿ ಕೂಡ ಕನ್ನಡದಲ್ಲಿ ಸಲ್ಲಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಸಂಚಾರ ನಿಯಮ ಉಲ್ಲಂಘನೆ ನೋಟಿಸ್ ಹಾಗೂ ದಂಡದ ರಸೀದಿಯ ಮಾದರಿಯನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗುತ್ತಿದೆ’ ಎಂದರು.

ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಅನಂತಕುಮಾರ ಬ್ಯಾಕೂಡ, ‘ರಸಗೊಬ್ಬರದ ಅಂಗಡಿಗಳಲ್ಲಿ ಕನ್ನಡ ರಸೀದಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ನಿಪ್ಪಾಣಿ ತಾಲ್ಲೂಕಿನಲ್ಲಿ ಕನ್ನಡ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿ ಕಂಡುಬರುತ್ತಿಲ್ಲ. ಚಿಕ್ಕೋಡಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

***

ನಗರದಲ್ಲಿ ಹೊಸ ಉದ್ಯಾನಗಳ ಪಟ್ಟಿ ಮಾಡಿದ ಬಳಿಕ ನಾಮಕರಣ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು
- ಎಂ.ಜಿ. ಹಿರೇಮಠ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.