ADVERTISEMENT

ಅವಶ್ಯಕತೆಗಷ್ಟೆ ಇಂಗ್ಲಿಷ್‌ ಇರಲಿ; ಕನ್ನಡಕ್ಕೆ ಮೊದಲ ಆದ್ಯತೆ: ಬಾಬಾಸಾಹೇಬ ಪಾಟೀಲ

ತಾಲ್ಲೂಕು ಕಸಾಪ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 2:52 IST
Last Updated 29 ಡಿಸೆಂಬರ್ 2025, 2:52 IST
ಎಂ.ಕೆ.ಹುಬ್ಬಳ್ಳಿಯಲ್ಲಿ ಭಾನುವಾರ ಜರುಗಿದ ಚನ್ನಮ್ಮನ ಕಿತ್ತೂರು ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು
ಎಂ.ಕೆ.ಹುಬ್ಬಳ್ಳಿಯಲ್ಲಿ ಭಾನುವಾರ ಜರುಗಿದ ಚನ್ನಮ್ಮನ ಕಿತ್ತೂರು ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು   

ಎಂ.ಕೆ.ಹುಬ್ಬಳ್ಳಿ: ಕನ್ನಡ ಭಾಷೆಗೆ ಇತಿಹಾಸವಿದೆ. ಭಾಷೆ ಕೇವಲ ಅಭಿಮಾನಕ್ಕೆ ಸಿಮಿತವಾಗಬಾರದು. ಉಳಿಸಿ-ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು. ಕನ್ನಡದ ಕೆಲಸಗಳಿಗೆ ಕೈಜೊಡಿಸಬೇಕು. ಇಲ್ಲವೇ ಪ್ರೋತ್ಸಾಹಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಬೈಲಹೊಂಗಲ ರಸ್ತೆ ಪಕ್ಕದ ಅನುಭವ ಮಂಟಪದಲ್ಲಿ ಭಾನುವಾರ ಜರುಗಿದ ಚನ್ನಮ್ಮನ ಕಿತ್ತೂರು ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳು ಕನ್ನಡ ಬೆಳೆಸುವ ಪ್ರಮುಖರು. ಪುಸ್ತಕದ ಮೂಲಕ ಕನ್ನಡವನ್ನು ಎಲ್ಲೆಡೆ ಹರಡುತ್ತಾರೆ. ಹಾಗಾಗಿ ಬರಹಗಾರರಿಗೆ ನಾವೆಲ್ಲ ಆದ್ಯತೆ ನೀಡಬೇಕು. ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು. ಶಾಲಾ ಮಕ್ಕಳಿಗೂ ದೇಣಿಗೆಯಾಗಿ ನೀಡಬೇಕೆಂದರು. ಕನ್ನಡಕ್ಕೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಮಾತೃಭಾಷೆ ಶ್ರೀಮಂತಿಕೆಯಿಂದ ಕೂಡಿದೆ. ವಚನ ಸಾಹಿತ್ಯದ ಮೂಲಕ ಶರಣರು ಕನ್ನಡವನ್ನು ಕಟ್ಟಿದ್ದಾರೆ. ಉತ್ತಮ ಆಚಾರ, ಸಂಸ್ಕಾರ ಹೊಂದಿರುವ ಕನ್ನಡ ಭಾಷೆ ಅಳಿಯಬಾರದು ಎಂದರು.

ಸಮ್ಮೇಳನಾಧ್ಯಕ್ಷ ಪಾಲಾಕ್ಷ ಶಿವಯೋಗೀಶ್ವರರು ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಯಾವುದೇ ಜಾತಿ-ಮತ, ಧರ್ಮ ಭೇದವಿಲ್ಲದೇ ನಾವೆಲ್ಲರೂ ಒಂದೇ ಎಂಬ ತತತ್ವದಡಿ ಮುನ್ನಡೆದವರು. ವಚನ ಸಾಹಿತ್ಯದ ಮೂಲಕ ಜಾತಿ ಭೇದ ಹೋಗಲಾಡಿಸಿ ಸಮಾಜವನ್ನು ಒಗ್ಗೂಡಿಸಿದರು. ಅಂತಹ ಶರಣರು ಸ್ಫರ್ಶಿಸಿದ ಕಾದರವಳ್ಳಿಯ ಸೀಮಿಮಠ ವಚನ ಸಾಹಿತ್ಯವನ್ನು ಪಸರಿಸುತ್ತಿದೆ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಎಂ.ಎಂ.ಸಂಗಣ್ಣವರ ಕನ್ನಡ ಭಾವುಟ ಹಸ್ತಾಂತರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯಲ್ಲಿ ಎಂ.ಎಂ.ಸಂಗಣ್ಣವರ ಬರೆದ ‘ಕುಂಭಕರ್ಣ ಬೇಡಿದ ವರ’, ಮಂಜುನಾಥ ಕಳಸಣ್ಣವರ ಬರೆದ ‘ಕಿತ್ತೂರು ಸಂಸ್ಥಾನದ ರಾಣಿಯರ’, ಗಜಾನನ ಸೊಗಲನ್ನವರ ಬರೆದ ‘ಸೊಗಲ ಸೋಮೇಶ್ವರನ ವಚನಗಳು’, ಸಿಆರ್‌ಪಿ ವಿನೋದ ಪಾಟೀಲ ಬರೆದ ‘ಸ್ಕೂಲ್ ಬೆಲ್ ಮಕ್ಕಳ ಕಥಾ ಸಂಕಲನ’, ಸುರೇಶ ಕರವಿನಕೊಪ್ಪ ಬರೆದ ರೈತರ ಬಗೆಗಿನ ಕೃತಿ ಬಿಡುಗಡೆಗೊಳಿಸಲಾಯಿತು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕಾಧ್ಯಕ್ಷ ಡಾ. ಎಸ್.ಬಿ.ದಳವಾಯಿ, ಬಿಇಓ ಸಿ.ವೈ.ತುಬಾಕದ, ಸಿಪಿಐ ಶಿವಾನಂದ ಗುಡಗನಟ್ಟಿ, ಸ್ದಳೀಯ ಪಪಂ ಅಧ್ಯಕ್ಷ ಪ್ರಕಾಶ ಕೊಡ್ಲಿ, ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಸಾಹಿತಿ ಎಂ.ಎಂ.ಸಂಗಣ್ಣವರ, ರಾಣಿ ಶುಗರ್ಸ್‌ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಎಂ.ಎಸ್.ಕಲ್ಮಠ, ವೀರೇಶ ಸಂಬಣ್ಣವರ, ಸಂಗನಗೌಡ ಪಾಟೀಲ, ಶಿವಪುತ್ರಪ್ಪ ಮರಡಿ, ಶೇಖರ ಹಲಸಗಿ, ಎಂ.ವೈ.ಮೆನಶೀಕಾಯಿ, ಡಾ. ಜಗದೀಶ ಹಾರುಗೊಪ್ಪ, ಶಿವಯೋಗಿಗೌಡ ಪಾಟೀಲ, ದಾನೇಶ ಸಾಣಿಕೊಪ್ಪ, ರುದ್ರಪ್ಪ ಹೈಬತ್ತಿ, ಪ್ರಕಾಶಗೌಡ ಪಾಟೀಲ, ಚಿನ್ನಪ್ಪ ಮುತ್ನಾಳ, ರುದ್ರಪ್ಪ ಕರವಿನಕೊಪ್ಪ, ಅಪ್ಪಯ್ಯ ಸೊಪ್ಪಿಮಠ, ಶಂಕರ ಕಿಲ್ಲೇದಾರ, ಅದೃಶ್ಯಪ್ಪ ಗದ್ದಿಹಳ್ಳಿ, ಸುರೇಶ ಮುತ್ನಾಳ, ದೇಮಪ್ಪ ಬರಸಗಿ, ಶ್ರೀಶೈಲ ಗಣಾಚಾರಿ, ಬಸಯ್ಯ ಮೈಸೂರಮಠ, ಮಹಾಂತೇಶ ಗಣಾಚಾರಿ ಸೇರಿದಂತೆ ಶಾಲಾ ಶಿಕ್ಷಕರು, ಸ್ಥಳೀಯ ಹಾಗೂ ಸುತ್ತಲಿನ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಮುಂಜಾನೆ ವೇದಿಕೆ ಮುಂಭಾಗದಲ್ಲಿ ರಾಷ್ಟ್ರ, ಪರಿಷತ್ ಮತ್ತು ನಾಡ ಧ್ವಜಾರೋಹನ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.