
ಚಿಕ್ಕೋಡಿ: ‘ಗಡಿ ಭಾಗ ಗಟ್ಟಿಯಾದರೆ ನುಡಿ ಗಟ್ಟಿಯಾಗುತ್ತದೆ. ಕನ್ನಡ ಮತ್ತು ಮರಾಠಿ ಭಾಷಿಕರು ಗಡಿಯಲ್ಲಿ ಅನ್ಯೋನ್ಯವಾಗಿ ಬಾಳಬೇಕು’ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಹೇಳಿದರು.
ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗ ಭಾನುವಾರ ಹಮ್ಮಿಕೊಂಡಿದ್ದ 8ನೇ ಕನ್ನಡ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಎರಡೂ ಭಾಷಿಕರ ಸಾಮರಸ್ಯದಿಂದ ಕನ್ನಡದ ಅಸ್ಮಿತೆ ಉಳಿಯುತ್ತದೆ’ ಎಂದರು.
‘ವಿದೇಶದಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸುವ ಕಾರ್ಯವನ್ನು ಹೊರನಾಡ ಕನ್ನಡಿಗರು ಮಾಡುತ್ತಿದ್ದು, ನಮ್ಮ ರಾಜ್ಯದಲ್ಲಿಯೇ ನಾವು ಕನ್ನಡ ಉಳಿಯಬೇಕೆಂದು ಹೋರಾಟ ಮಾಡುತ್ತಿರುವುದು ವಿಪರ್ಯಾಸ’ ಎಂದು ‘ಪ್ರಜಾವಾಣಿ‘ಯಲ್ಲಿ ಈಚೆಗೆ ಪ್ರಕಟವಾದ ವಿಶೇಷ ಲೇಖನವೊಂದನ್ನು ಉಲ್ಲೇಖಿಸಿ ಮಾತನಾಡಿದರು.
ಯುವ ನಾಯಕ ಉತ್ತಮ ಪಾಟೀಲ ಮಾತನಾಡಿ, ‘ಕರ್ನಾಟಕ– ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರದಗಾ ಕನ್ನಡ ಬಳಗದ ಕಾರ್ಯ ಶ್ಲಾಘನೀಯ. ಕನ್ನಡದ ಮನಸುಗಳೆಲ್ಲ ಕನ್ನಡಕ್ಕಾಗಿ ಕಂಕಣಬದ್ಧರಾಗಿ ದುಡಿಯಬೇಕು’ ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಚಿಂಚಣಿಯ ಅಲ್ಲಮಪ್ರಭು ಸಂಸ್ಥಾನ ಮಠದ ಶಿವಪ್ರಸಾದ ದೇವರು ಮಾತನಾಡಿ, ‘ಗಡಿಯಲ್ಲಿ ಕನ್ನಡ ಕಟ್ಟಲು ಚಿಂಚಣಿಯ ಮಠ ಹಾಗೂ ಲಿಂಗೈಕ್ಯ ಅಲ್ಲಮಪ್ರಭು ಸ್ವಾಮೀಜಿ ಅವಿರತವಾಗಿ ದುಡಿದಿದ್ದಾರೆ’ ಎಂದು ಹೇಳಿದರು.
ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ, ‘ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದರಿಂದ ಮಕ್ಕಳು ಸಂಸ್ಕಾರವಂತರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಎಂನಿನಿಯರ್ ತಾತ್ಯಾಸಾಹೇಬ ಚೌಗುಲೆ, ವೈದ್ಯ ಸುದರ್ಶನ ಮೂರಾಬಟ್ಟೆ, ಮುಖ್ಯ ಶಿಕ್ಷಕಿ ಮಂಗಲ ಖೋತ, ಸಾಹಿತಿ ಶಿವಾನಂದ ಭಾಗಾಯಿ, ಪತ್ರಕರ್ತ ಸುಧೀರ ಕುಂಭೋಜಕರ ಅವರನ್ನು ಸನ್ಮಾನಿಸಲಾಯಿತು.
ಸದಲಗಾದ ಧರಿಖಾನ ಅಜ್ಜ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ನಿಪ್ಪಾಣಿ ಬಿಇಒ ಮಹಾದೇವಿ ನಾಯಿಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಕಾಂಬಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾಸಾಹೇಬ ಹವಲೆ, ಸುಮಿತ್ರಾ ಉಗಳೆ, ಅಭಿನಂದನ ಮೂರಾಬಟ್ಟೆ, ರತನ ಮೆಳವಂಕಿ, ಸುದರ್ಶನ ಮೂರಾಬಟ್ಟೆ, ಅರುಣ ದೇಸಾಯಿ, ಸಾಗರ ಮಿರ್ಜೆ, ಅರವಿಂದ ಕರಾಡೆ, ಕನ್ನಡ ಬಳಗದ ಅಧ್ಯಕ್ಷ ಸಂಜೀವ ಗಾವಡೆ, ಗೌರವಾಧ್ಯಕ್ಷ ರಾಜು ಖಿಚಡೆ, ಮಾಣಿಕ ಚಂದಗಡೆ, ಬಾಹುಬಲಿ ನರವಾಡೆ ಇದ್ದರು.
ಗಡಿಭಾಗದಲ್ಲಿ ಕನ್ನಡ ಭಾಷೆಯ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಟ್ಟಲ್ಲಿ ಕನ್ನಡ ಮತ್ತಷ್ಟು ಭದ್ರವಾಗುತ್ತದೆಸಂಪಾದನಾ ಸ್ವಾಮೀಜಿ ಚಿಕ್ಕೋಡಿಯ ಚರಮೂರ್ತಿ ಮಠ
ಅದ್ದೂರಿ ಮೆರವಣಿಗೆ
ಇದಕ್ಕೂ ಮೊದಲು ಬೆಳಿಗ್ಗೆ ಧ್ವಜಾರೋಹಣ ಭುವನೇಶ್ವರಿ ಪೂಜೆ ಗ್ರಂಥಪೂಜೆ ಬುತ್ತಿಪೂಜೆಗಳೊಂದಿಗೆ ಪ್ರಾರಂಭವಾದ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಂದ್ರ ವಡ್ಡರ ಚಾಲನೆ ನೀಡಿದರು. ರಥ ಕುದುರೆ ಒಂಟೆ ಗೊಂಬೆ ಕುಣಿತ ಸೇರಿದಂತೆ ವಿವಿಧ ರೂಪಕಗೊಂದಿಗೆ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಗಜಂಪಿ ದಂಪತಿಯ ಮೆರವಣಿಗೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮ್ಮೇಳನ ಆಯೋಜಿಸಿದ್ದ ಡಿ.ಎಸ್. ನಾಡಗೆ ಸಂಯುಕ್ತ ಪಿಯು ಮಹಾವಿದ್ಯಾಲಯದ ಆವರಣ ತಲುಪಿತು. ಜ್ಞಾನಪೀಠ ಪುರಸ್ಕೃತ ಸಾಹಿತಿಗಳು ಸ್ವಚ್ಛತೆ ಅಭಿಯಾನ ಹಳ್ಳಿ ಜೀವನ ನೀರಿನ ಸಂರಕ್ಷಣೆ ಹಕ್ಕಿಗಳು ಕನ್ನಡ ನಾಡಿನ ಹೋರಾಟಗಾರರ ರೂಪಕಗಳು ಸೇರಿದಂತೆ ಕನ್ನಡ ನಾಡು ನುಡಿಯನ್ನು ಮೆಲುಕು ಹಾಕುವ ಹಾಡುಗಳು ಮೆರುಗು ತಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.