ADVERTISEMENT

ಗಾಢ ಪರಿಣಾಮ ಬೀರುವ ಚುಟುಕು: ಅಪ್ಪಾಸಾಹೇಬ ಅಲಿಬಾದಿ

ಚುಸಾಪ ರಾಜ್ಯಮಟ್ಟದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:12 IST
Last Updated 17 ನವೆಂಬರ್ 2025, 4:12 IST
ಅಥಣಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನಿಂದ ಜರುಗಿದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಅಥಣಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನಿಂದ ಜರುಗಿದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಅಥಣಿ: ‘ಕನ್ನಡ ಕಾವ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವವಾದದ್ದು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ಮೂರ್ನಾಲ್ಕು ಸಾಲುಗಳ ಚುಟುಕುಗಳು ಜನರ ವಿಶ್ವಾಸ ಗಳಿಸಿವೆ. ಕನ್ನಡದ ಮನಸ್ಸುಗಳನ್ನು ಕಟ್ಟುವಲ್ಲಿ ಚುಟುಕು ಸಾಹಿತ್ಯದ ಪಾತ್ರ ಹಿರಿದಾಗಿದೆ’ ಎಂದು ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.

ಅವರು ಅಥಣಿ ಪಟ್ಟಣದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಫೌಂಡೇಶನ್‌ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಕನ್ನಡ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕನ್ನಡ ಕಾವ್ಯ ಪರಂಪರೆಯಲ್ಲಿ ಅನೇಕ ಚುಟುಕುಗಳು ಪರಿಣಾಮಕಾರಿಯಾಗಿ ಪ್ರಭಾವ ಬೀರಿವೆ. ಚುಟುಕು ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಸರ್ವಜ್ಞನ ತ್ರಿಪದಿಯಿಂದ ಹಿಡಿದು ಶರಣರ ವಚನ ಸಾಹಿತ್ಯ, ಹನಿಗವನ ಸೇರಿದಂತೆ ಹಲವು ಚಿಕ್ಕ–ಚಿಕ್ಕ ಕವನಗಳು ಚುಟುಕು ಸಾಹಿತ್ಯದಲ್ಲಿ ಬರುತ್ತವೆ’ ಎಂದರು.

ADVERTISEMENT

ಸಮಾರಂಭವನ್ನು ಉದ್ಘಾಟಿಸಿದ ಉದ್ಯಮಿ ರವಿ ಪೂಜಾರಿ ಮಾತನಾಡಿ, ‘ಗಡಿ ಭಾಗದಲ್ಲಿ ಇನ್ನಷ್ಟು ಚುಟುಕು ಸಾಹಿತ್ಯದ ಚಟುವಟಿಕೆಗಳು ಜರುಗಲಿ’ ಎಂದು ಹಾರೈಸಿದರು.

ಹಿರಿಯ ಅನುವಾದ ಸಾಹಿತಿ ಜೆ.ಪಿ. ದೊಡಮನಿ ಮಾತನಾಡಿ, ‘ಮಹಾಕಾವ್ಯದ ಉದರದಲ್ಲಿ ಅರಳಿದ ಚುಟುಕು ಸಾಹಿತ್ಯ, ವಚನ ಸಾಹಿತ್ಯದಲ್ಲಿ ವಿಶಾಲವಾಗಿ ಬೆಳೆದಿದೆ. ಕಾವ್ಯ ಚಿಕ್ಕದಾದರೂ ಅದರ ಪ್ರಭಾವ ಮತ್ತು ಪರಿಣಾಮ ದೊಡ್ಡದು. ಮನಸ್ಸಿಗೆ ಕಚಗುಳಿ ಇಡುವ, ಸೂಕ್ತ ಮನಸ್ಸುಗಳನ್ನು ಜಾಗೃತಗೊಳಿಸುವ ಚುಟುಕುಗಳಿಗೆ ಹೊಸ ನೆಲೆ ದೊರಕಿಸಬೇಕಿದೆ’ ಎಂದರು.

ಸಾಧಕರಿಗೆ ಸನ್ಮಾನ: ಕನ್ನಡ ಸೇವೆ ಮಾಡುತ್ತಿರುವ ಹೋರಾಟಗಾರ ಅಣ್ಣಾಸಾಹೇಬ ತೆಲಸಂಗ, ಆಕಾಶ ನಂದಗಾವ, ಜೆ.ಪಿ. ದೊಡಮನಿ, ಪ್ರಭಾವತಿ ಭೋರಗಾoವಕರ, ನಿಜಪ್ಪ ಹಿರೇಮನಿ, ಮಹಾದೇವ ಬಿರಾದಾರ, ಬಸವರಾಜ ಮಾಳಿ ಮತ್ತು ಕೈಲಾಸ ಮದಬಾವಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಯೋಗ ಶಿಕ್ಷಕ ಹಾಗೂ ಸಾಹಿತಿ ಎಸ್.ಕೆ. ಹೊಳೆಪ್ಪನವರ, ಸಂಕೋನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಪರಶುರಾಮ ಸೋನಕರ, ಶಿಕ್ಷಕ ಸಂತೋಷ ಬಡಕಂಬಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಎಸ್. ದೊಡ್ಡನಿಂಗಪ್ಪಗೋಳ, ಎಸ್.ಕೆ. ಹೊಳೆಪ್ಪನವರ, ರಾಮಣ್ಣ ದೊಡ್ಡನಿಂಗಪ್ಪಗೋಳ, ಸಂತೋಷ ಬಡಕಂಬಿ ಇದ್ದರು.

55 ಕವಿಗಳು ಭಾಗಿ

ದೇವೇಂದ್ರ ಬಿಸ್ವಾಗರ ಪ್ರಕಾಶ ಖೋತ ಕೈಲಾಸ್ ಮದಭಾವಿ ಕುಮಾರ ತಳವಾರ ಭಾರತಿ ಅಲಿಬಾದಿ ಸೇರಿದಂತೆ 55ಕ್ಕೂ ಕವಿಗಳು ಚುಟುಕುಗಳನ್ನು ಓದಿದರು. ಸಾಲುಮರದ ತಿಮ್ಮಕ್ಕನ ಬಗ್ಗೆ ರೈತರ ಕಬ್ಬಿನ ದರದ ಹೋರಾಟ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಚುಟುಕುಗಳು ಕೇಳಿ ಬಂದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.