
ಸತ್ತಿಗೇರಿ: ‘ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು. ಜತೆಗೆ, ಕನ್ನಡ ಓದಲು ಪ್ರೋತ್ಸಾಹಿಸಬೇಕು’ ಎಂದು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೀಲಕಂಠ ಮಲಕನ್ನನವರ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಆವರಣದಲ್ಲಿ ಬುಧವಾರ ನಡೆದ ಯರಗಟ್ಟಿ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಯರಗಟ್ಟಿ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮಹತ್ವದ ಇತಿಹಾಸ ಹೊಂದಿದೆ. ಈ ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ತಾಲ್ಲೂಕಿನ ಯುವಜನರು ಮಾಡಬೇಕು’ ಎಂದರು.
ಸಮ್ಮೇಳನ ಉದ್ಘಾಟಿಸಿದ ಜಾನಪದ ವಿದ್ವಾಂಸ ಪ್ರೊ.ಸಿ.ಕೆ. ನಾವಲಗಿ ಮಾತನಾಡಿ, ‘ತಲ್ಲೂರು ಗ್ರಾಮವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ದೇಸಗತಿ ಮನೆತನದ ರುದ್ರಮ್ಮ ತಾಯಿಯು ಕಿತ್ತೂರು ಸಂಸ್ಥಾನದ ರಾಣಿಯಾಗಿ ಸಂಸ್ಥಾನದ ಹೆಸರುಳಿಸಲು ಕತ್ತಿ, ಕವಚವನ್ನುಟ್ಟು ಹೋರಾಡಿದ ಧೀರ ಮಹಿಳೆಯಾಗಿದ್ದಾಳೆ. ದುರಂತವೆಂದರೆ ಇಂತಹ ವೀರರಾಣಿಯ ಕುರಿತ ಐತಿಹಾಸಿಕ ದಾಖಲೆಗಳು ಅಲಭ್ಯವಾಗಿದ್ದು, ವಿದ್ವಾಂಸರು ಈ ಕುರಿತು ಹೆಚ್ಚಿನ ಸಂಶೋಧನೆಗೆ ತೊಡಗಬೇಕು’ ಎಂದು ಹೇಳಿದರು.
ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ ಆಡಿದರು. ದೇಸಗತಿ ಮನೆತನದ ವಿಕ್ರಮಕುಮಾರ ದೇಸಾಯಿ ಅವರು ರಾಜಶೇಖರ ಬಿರಾದಾರ ಅವರ ‘ಯರಗಟ್ಟಿ ಕಾವ್ಯ ಕುಸುಮ’ ಹಾಗೂ ಆರ್.ಎಸ್.ಕಲ್ಲಣ್ಣವರ ಅವರ ‘ಮಕರಂದ’ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ದೇಸಾಯಿ ಕೋಟೆ ಆವರಣದಿಂದ ಸಮ್ಮೇಳನದ ಸರ್ವಾಧ್ಯಕ್ಷರ ದಂಪತಿಯನ್ನು ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿ ಕೊಳ್ಳಲಾಯಿತು.
ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಕಸಪಾ ತಾಲ್ಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ತಹಶೀಲ್ದಾರ ಎಂ.ವಿ. ಗುಂಡಪ್ಪಗೋಳ, ಬಿಇಒ ಎ.ಎ. ಖಾಜಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಿ..ಎನ್.ಬ್ಯಾಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪಿಡಿಒ ರಾಘವೇಂದ್ರ ಹಲವರು ಇದ್ದರು.
ಕನ್ನಡ ಸಾಹಿತ್ಯ ಜಗತ್ತನ್ನು ಹೊಸ ತಲೆಮಾರಿಗೆ ಪರಿಚಯಿಸುವ ಅನಿವಾರ್ಯತೆ ಇದೆ. ಕನ್ನಡ ನಾಡು ನುಡಿಯ ವಿಚಾರದ ಜಾಗೃತಿಯನ್ನು ಹೊಸ ತಲೆಮಾರಿಗೆ ಮೂಡಿಸಬೇಕುವಿಶ್ವಾಸ ವೈದ್ಯ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.