ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಾಡದೇವಿ ಭುವನೇಶ್ವರಿಗೆ ಸಚಿವ ಸತೀಶ ಜಾರಕಿಹೊಳಿ ಶುಕ್ರವಾರ ಪೂಜೆ ಸಲ್ಲಿಸಿದರು. ಡಾ.ಭೀಮಾಶಂಕರ ಗುಳೇದ, ಆಸಿಫ್ ಸೇಠ್, ಮೊಹಮ್ಮದ್ ರೋಷನ್, ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ರಾಹುಲ್ ಶಿಂಧೆ ಪಾಲ್ಗೊಂಡರು
ಬೆಳಗಾವಿ: ‘ಕನ್ನಡ ನಾಡು– ನುಡಿ, ನೆಲ– ಜಲ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ರೂಪಿಸಲು ಎಲ್ಲರೂ ಕೈ ಜೋಡಿಸೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಕರ್ನಾಟಕ ಏಕೀಕರಣ ಚಳವಳಿಗೆ ಬೆಳಗಾವಿ ಜಿಲ್ಲೆ ನೀಡಿದ ಕೊಡುಗೆ ಅವಿಸ್ಮರಣೀಯ. ಗಂಗಾಧರ ತುರಮುರಿ, ಗಂಗಾಧರರಾವ್ ದೇಶಪಾಂಡೆ, ಆರ್.ಎಸ್.ಹುಕ್ಕೇರಿ, ನಾಗನೂರು ಶಿವಬಸವ ಸ್ವಾಮೀಜಿ, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಬಸವಪ್ರಭು ಕೋರೆ, ಬಿ.ಎನ್.ದಾತಾರ, ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಚನ್ನಪ್ಪ ವಾಲಿ ಮತ್ತಿತರರು ಕನ್ನಡದ ಬೆಳವಣಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ’ ಎಂದರು.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ರಂಗದಲ್ಲಿ ಸಾಧನೆಗೈದ 11 ಜನರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರ ನೀಡಲಾಯಿತು
‘ಬ್ರಿಟಿಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ವೀರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪ್ರಥಮ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ. ನಾಡು– ನುಡಿ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆಯೂ ಅಪಾರ’ ಎಂದು ತಿಳಿಸಿದರು.
‘ಕರ್ನಾಟಕ ಏಕೀಕರಣ ಮಾತ್ರವಲ್ಲದೆ; ಗೋವಾ ವಿಮೋಚನಾ ಹೋರಾಟದಲ್ಲೂ ಬೆಳಗಾವಿ ಮುಂಚೂಣಿಯಲ್ಲಿತ್ತು. ಬೆಳಗಾವಿಯು ಈ ಸತ್ಯಾಗ್ರಹದ ಮುಖ್ಯ ಕೇಂದ್ರವಾಗಿತ್ತು’ ಎಂದು ತಿಳಿಸಿದರು.
‘ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ರಾಜ್ಯ ಸರ್ಕಾರ, ಎಲ್ಲ ವರ್ಗಗಳ ಜನರ ಸಂಕಷ್ಟಕ್ಕೆ ಮಿಡಿಯುತ್ತಿದೆ. ಗಡಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ’ ಎಂದರು.
ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಆಸಿಫ್ ಸೇಠ್, ಅಭಯ ಪಾಟೀಲ ಅವರು, ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಪೊಲೀಸರು, ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ, ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇತರರಿದ್ದರು.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.