
ಬೆಳಗಾವಿಯ ಶಿವಾಜಿ ಉದ್ಯಾನದಿಂದ ಶನಿ ಮಂದಿರ ಮಾರ್ಗವಾಗಿ ರಾಣಿ ಚನ್ನಮ್ಮನ ವೃತ್ತದವರೆಗೆ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ಆಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಭರಮನಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೆಳಗಾವಿ: ‘ಮೈಸೂರು ದಸರಾ ಎಷ್ಟೊಂದು ಸುಂದರ’ ಎಂಬ ಹಾಡು ಕೇಳಿದ್ದೀರಿ. ಅಷ್ಟೇ ಸುಂದರ ಬೆಳಗಾವಿಯಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷ ಅಂದಾಜು 10 ಲಕ್ಷದಷ್ಟು ಕನ್ನಡ ಹೃದಯಗಳು ಸಮಾವೇಶಗೊಂಡು ಭುವನೇಶ್ವರಿಗೆ ವೈಭವ ತಂದುಕೊಡುತ್ತಾರೆ. ಈ ಬಾರಿ ಅದಕ್ಕೆ ಕಳಶವಿಟ್ಟಂತೆ ಸಿಡಿಮದ್ದಿನ ಪ್ರದರ್ಶನ ಮಾಡಲಾಗುತ್ತಿದೆ.
ಹೌದು. ಇದೇ ಮೊದಲಬಾರಿಗೆ ರಾಜ್ಯೋತ್ಸವವೂ ದೀಪಾವಳಿಯ ಹೊಳಪು ಪಡೆಯಲಿದೆ. ಅಕ್ಟೋಬರ್ 31ರ ರಾತ್ರಿ 12ಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ಬಾನಂಗಳ ಬೆಳಗಲಿದೆ. ನಡುರಾತ್ರಿಯಲ್ಲಿ ಬಣ್ಣಬಣ್ಣದ ಸಿಡಿಮದ್ದುಗಳ ಚಿತ್ತಾರ ಕಾಣಲಿದೆ. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಮುಖಂಡರು ಈ ಆಕರ್ಷಕ ಆಯೋಜನೆ ಮಾಡಿದ್ದಾರೆ.
ಪ್ರತಿ ವರ್ಷ ಅ.31ರ ರಾತ್ರಿ ಆರಂಭವಾಗುವ ವೈಭವ ನವೆಂಬರ್ 1ರ ಮಧ್ಯರಾತ್ರಿ 12ರವರೆಗೂ ಮುಂದುವರಿಯುತ್ತದೆ. ಹಾಡು, ನೃತ್ಯ, ನಾಟಕ, ಪ್ರದರ್ಶನ, ಧ್ವನಗಳ ಹಾರಾಟ, ಕುಣಿದು ಕುಪ್ಪಳಿಸುವ ಯುವಪಡೆ ನಿರಂತರ ಮುಂದುವರಿಯಲಿದೆ. ಬೆಳಗಾವಿ ಬಿಟ್ಟರೆ ರಾಜ್ಯದ ಬೇರೆಲ್ಲೂ ಇಂಥ ಸಡಗರ ನೋಡಲು ಸಿಗದು.
‘ಪ್ರತಿ ವರ್ಷವೂ ಅಕ್ಟೋಬರ್ 31ರ ರಾತ್ರಿಯೇ ಚನ್ನಮ್ಮ ವೃತ್ತದಲ್ಲಿ ಅಪಾರ ಜನ ಸೇರುತ್ತಾರೆ. ನಡುರಾತ್ರಿಯೇ ರಾಜ್ಯೋತ್ಸವದ ಉನ್ಮಾದ ಇಮ್ಮಡಿಸುತ್ತದೆ. ಇದನ್ನೇ ಅಧಿಕೃತವಾಗಿ ಮಾಡಲು ನಾವು ಮುಂದಾಗಿದ್ದೇವೆ. ಈ ಬಾರಿ ಸಿಡಿಮದ್ದಿನ ಪ್ರದರ್ಶನ ಮಾಡಿಸಿ, ಗಡಿ ಕನ್ನಡಿಗರ ಮನಸ್ಸಿಗೆ ಇನ್ನಷ್ಟು ಹುಮ್ಮಸ್ಸು ನೀಡಲಿದ್ದೇವೆ. ಇದಕ್ಕಾಗಿ ವಿಶೇಷ ತರಬೇತಿ ಪಡೆದ ತಂಡ ಬರಲಿದ್ದು, ಬಾನಿನಲ್ಲಿ ಬಣ್ಣದ ಚಿತ್ತಾರ ಮೂಡಿಸಲಿದ್ದಾರೆ. ನಮ್ಮ ಅಧಿಕೃತ ಉತ್ಸವ ಅಲ್ಲಿಂದಲೇ ಆರಂಭವಾಗಲಿದೆ’ ಎಂದು ಕರವೇ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮರಾಠಿಗರ ದಬ್ಬಾಳಿಕೆಯ ಮೂಸೆಯಿಂದ ಹೊರಸೂಸಿದ ಕನ್ನಡದ ಘಮಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷ 8 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಉತ್ಸವದಲ್ಲಿ ಕುಣಿದು– ಕುಪ್ಪಳಿಸಿದರು. ಈ ವರ್ಷ 10 ಲಕ್ಷ ಮೀರಿಸುವ ಸಾಧ್ಯತೆ ಇದೆ.
ವೃತ್ತದ ಅಲಂಕಾರ, ಭದ್ರತಾ ವ್ಯವಸ್ಥೆ: ಮಹಾನಗರ ಪಾಲಿಕೆಯಿಂದ ರಾಣಿ ಚನ್ನಮ್ಮ ಪ್ರತಿಮೆಗೆ ಬಣ್ಣ ಬಳಿದು ಅಲಂಕಾರ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಮೆಯ ಸುತ್ತ ವರ್ಣರಂಜಿತ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಹಗಲು– ರಾತ್ರಿಯನ್ನು ಒಂದು ಮಾಡುವಂತೆ ನಡೆಯುವ ಮೆರವಣಿಗೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ತುದಿಗಾಲ ಮೇಲೆ ನಿಂತಿದ್ದಾರೆ.
ನಗರದಲ್ಲಿ ಈಗಾಗಲೇ ಕನ್ನಡ ಧ್ವಜದ ಬಣ್ಣವಿರುವ, ಕರ್ನಾಟಕ ನಕಾಶೆ ಚಿತ್ರಿಸಿದ ಟಿ– ಷರ್ಟುಗಳು, ಟವಲ್‌ಗಳು, ಧ್ವಜಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಎಲ್ಲೆಂದರಲ್ಲಿ ಸ್ವಾಗತ ಕಮಾನುಗಳು ಸಿದ್ಧಗೊಳ್ಳುತ್ತಿವೆ. ಕಳೆದ ವರ್ಷ ₹10 ಲಕ್ಷದಷ್ಟು ಟಿ ಷರ್ಟ್‌ಗಳು ಮಾರಾಟವಾಗಿದ್ದವು. ಈ ಬಾರಿ ಅದನ್ನೂ ಮೀರಿಸಲಿದ್ದೇವೆ ಎಂದು ವರ್ತಕರು ಹೇಳುತ್ತಾರೆ.
ರಾಜ್ಯೋತ್ಸವ ದಿನದಂದೇ ತಮ್ಮ ಕರಾಳ ಮನಸ್ಸಿನ ಪ್ರದರ್ಶನ ಮಾಡುವ ಎಂಇಎಸ್‌ನ ಕರಾಳ ದಿನಾಚರಣೆಗೆ ಮತ್ತೆ ಅನುಮತಿ ಕೋರಲಾಗಿದೆ. ಇದೂವರೆಗೆ ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಶಾಂತಿಯುತ ಮೆರವಣಿಗೆಗೆ ಅನುಮತಿ ನೀಡುವ ಪರಿಪಾಠ ಬೆಳೆದಿದೆ. ಈ ಬಾರಿ ಅದನ್ನೂ ಮಾಡುವಂತಿಲ್ಲ ಎಂದು ಕನ್ನಡ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ; ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ನಾಡದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. ಬೆರಳೆಣಿಕೆಯಷ್ಟಿರುವ ಎಂಇಎಸ್ ನಾಯಕರು ಈಗಾಗಲೇ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಶಾಸಕರಿಗೆ ಆಹ್ವಾನ ನೀಡಿದ್ದಾರೆ. ಅವರೆಲ್ಲರಿಗೂ ಜಿಲ್ಲಾಡಳಿತ ಗಡಿ ಪ್ರವೇಶ ನಿಷೇಧಿಸಿದೆ.
ಎಂಇಎಸ್ ನಾಯಕರಿಗೆ ಸೆಡ್ಡು ಹೊಡೆಯಲು ಕನ್ನಡ ಯುವಜನರು ಸಿದ್ಧವಾಗಿ ನಿಂತಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಭುವನೇಶ್ವರಿ ಮೆರವಣಿಗೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದಿಂದಲೇ ಆರಂಭಿಸಲು ನಿರ್ಧರಿಸಿದ್ದಾರೆ. ಅದನ್ನು ಕೂಡ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಭುನವೇಶ್ವರಿ ಮೆರವಣಿಗೆ ಆರಂಭಿಸಲಿದ್ದಾರೆ. ಈ ಮೂಲಕ ಕನ್ನಡಿಗರ ಸಾಮರಸ್ಯದ ನಡೆಯಲ್ಲೂ ತೋರಿಸಲಿದ್ದಾರೆ. ಪ್ರತಿ ವರ್ಷ ರಾಣಿ ಚನ್ನಮ್ಮ ವೃತ್ತ ಕಾಲೇಜು ರಸ್ತೆ ಹಾಗೋ ಬೋಗಾರ್‌ವೇಸ್‌ನಲ್ಲಿ ನಡೆಯುತ್ತಿದ್ದ ಕನ್ನಡತಾಯಿಯ ಮೆರವಣಿಗೆ ಇನ್ನು ಅರ್ಧ ನಗರ ವ್ಯಾಪಿಸಲಿದೆ. ‘ಪ್ರತಿ ವರ್ಷ ಎಂಇಎಸ್ ಪುಂಡರು ಮರಾಠ ಮಂದಿರದ ಭವನದಲ್ಲೇ ಸಭೆ ಸೇರಿ ಸಲ್ಲಿಂದ ಮೆರವಣಿಗೆ ನಡೆಸುತ್ತಾರೆ. ರಾಜ್ಯೋತ್ಸವ ದಿನದಂದೂ ಅಲ್ಲಿ ಕಳೆಗುಂದಿದ ವಾತಾವರಣ ಇರುತ್ತದೆ. ಅಲ್ಲಿನ ಕನ್ನಡಿಗರ ಕೋರಿಕೆ ಮೇರೆಗೆ ನಾವು ಅಲ್ಲಿಯೂ ಕನ್ನಡ ಧ್ವಜ ಹಾರಿಸಲಿದ್ದೇವೆ’ ಎಂದು ದೀಪಕ್ ಗುಡಗನಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.