
ಏತ ನೀರಾವರಿ ಯೋಜನೆ
ಚಿಕ್ಕೋಡಿ: ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಕರಗಾಂವ ಏತ ನೀರಾವರಿ ಯೋಜನೆ ಕೊನೆಗೂ ಕೈಗೂಡುವ ಕಾಲ ಬಂದಿದೆ. 14 ಗ್ರಾಮಗಳ 8,390 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಭಾಗ್ಯ ನೀಡುವ ಈ ಯೋಜನೆಗೆ ₹567 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಗುರುವಾರ (ಡಿ.4) ಇದಕ್ಕೆ ಚಾಲನೆ ನೀಡಲಾಗುತ್ತಿದೆ.
ಕರಗಾಂವ, ಕರೋಶಿ, ಡೋಣವಾಡ, ಬಂಬಲವಾಡ, ಬೆಣ್ಣಿಹಳ್ಳಿ, ಕಮತ್ಯಾನಟ್ಟಿ, ನಾಗರಮುನ್ನೋಳಿ, ಉಮರಾಣಿ, ಕಬ್ಬೂರ, ಬೆಳಕೂಡ, ಮುಗಳಿ, ಹಂಚಿನಾಳ, ಇಟ್ನಾಳ, ಕುಂಗಟೋಳ್ಳಿ ಗ್ರಾಮಗಳ ಜಮೀನು ಕರಗಾಂವ ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಹಸಿರಿನಿಂದ ಕಂಗೊಳಿಸಲಿದೆ.
ಶಾಸಕ ದುರ್ಯೋಧನ ಐಹೊಳೆ ಪ್ರಯತ್ನದಿಂದ ಮೇ ತಿಂಗಳಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹100 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಜಾಕ್‌ವೆಲ್ ನಿರ್ಮಾಣ, ವಿದ್ಯುತ್ ಸಂಪರ್ಕ ಹಾಗೂ ಸಂಬಂಧಿತ ಕಾಮಗಾರಿ ಹಾಗೂ 4 ಕಿ.ಮೀ ಪೈಪಲೈನ್ ಮಾಡಲಾಗುತ್ತಿದೆ. ₹467 ಕೋಟಿ ಮೊತ್ತದಲ್ಲಿ 2ನೇ ಹಂತದಲ್ಲಿ ಇನ್ನುಳಿದ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇದಕ್ಕೆ ಕೃಷ್ಣಾ ನದಿಯಿಂದ 0.77 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.
ಕರಗಾಂವ ಏತ ನೀರಾವರಿ ಯೋಜನೆ ನನ್ನ ಮುಖ್ಯ ಯೋಜನೆ. ಕೆಲವೇ ವರ್ಷಗಳಲ್ಲಿ ಈ ಭಾಗದ ಜಮೀನು ಹಸಿರಿನಿಂದ ಕಂಗೊಳಿಸಲಿದೆ–ದುರ್ಯೋಧನ ಐಹೊಳೆ, ಶಾಸಕ ರಾಯಬಾಗ
ಏತ ನೀರಾವರಿಗೆ ಆಗ್ರಹಿಸಿ ಡಿ.4ರಂದು ಬಂದ್ ಕರೆ ನೀಡಿದ್ದೇವು. ರೈತರ ಒಗ್ಗಟ್ಟಿಗೆ ಮಣಿದ ಸರ್ಕಾರ ಕೊನೆಗೂ ಬೇಡಿಕೆ ಈಡೇರಿಸಿದೆ–ಗಜಾನಂದ ದಾನನ್ನವರ, ರೈತ ಉಮರಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.