ಬೆಳಗಾವಿ: ‘ಸೈನಿಕರ ತ್ಯಾಗ, ಬಲಿದಾನ, ಸೇವಾ ಮನೋಭಾವದಿಂದ ದೇಶ ಸುರಕ್ಷಿತವಾಗಿ ಇದೆ. ದೇಶದ ಪ್ರತಿಯೊಂದು ಹೆಜ್ಜೆಯೂ ಸೈನಿಕರ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಲೇಖಕಿ ಹಾರಿಕಾ ಮಂಜುನಾಥ ಹೇಳಿದರು.
ನಗರದಲ್ಲಿ ಶನಿವಾರ ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಆಯೋಜಿಸಿದ ಕಾರ್ಗಿಲ್ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ದೇಶದ ಸೈನ್ಯ ಸಾಕಷ್ಟು ಪ್ರಬಲವಾಗಿದೆ. ಉಗ್ರರನ್ನು ಸದೆಬಡಿಯುವಲ್ಲಿ ನಮ್ಮ ಯೋಧರು ತೋರಿದ ಶೌರ್ಯ ಅಪಾರ. ಈವರೆಗೆ ದೇಶ ಎದುರಿಸಿದ ಯುದ್ದಗಳಲ್ಲಿ ನಮ್ಮ ಸಾವಿರಾರು ಸೈನಿಕ ಬಲಿದಾನ ಮಾಡಿದ್ದಾರೆ. ಅವರು ಮಡಿಯುವಾಗ ಹೆತ್ತ ತಾಯಿಯಷ್ಟೇ ಭಾರತ ಮಾತೆಯನ್ನೂ ನೆನೆದು ಜೀವ ಬಿಟ್ಟಿದ್ದಾರೆ. ಇಂಥ ಪರಾಕ್ರಮ, ದೇಶಭಕ್ತಿ ಇಲ್ಲಿ ಮಾತ್ರ ನೋಡಲು ಸಾಧ್ಯ’ ಎಂದರು.
ಮಹಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪೂಜಾರಿ ಮಾತನಾಡಿ, ‘ಗಡಿಯಲ್ಲಿ ತಾಯಿನಾಡಿಗಾಗಿ ಬೆವರು ಸುರಿಸುತ್ತಿರುವ ಸೈನಿಕರ ಕುಟುಂಬ ರಕ್ಷಿಸುವ ಕಾರ್ಯ ನಮ್ಮಿಂದಾಗಬೇಕು. ತಮ್ಮ ಕುಟುಂಬವನ್ನು ತೊರೆದು ದೇಶದ ರಕ್ಷಣೆ ಹಗಲಿರುಳು ಶ್ರಮಿಸುತ್ತಾರೆ. ಅವರ ಕುಟುಂಬ ಕಷ್ಟದಲ್ಲಿದಾಗ ನಾವು ಕೈ ಜೋಡಿಸಬೇಕು’ ಎಂದರು.
ಕಾರ್ಗಿಲ್ ಯುದ್ಧ ಹಾಗೂ ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾದ ಯೋಧರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಗಪ್ಪ ಮೇಟಿ, ಮಾಜಿ ಶಾಸಕ ಅಂಜಯ ಪಾಟೀಲ, ಚೇತನ ಅಂಗಡಿ, ಡಾ. ಸತೀಶ ಚೌಲಿಗೇರಿ, ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಸೈನಿಕರಾದ ಈರಪ್ಪ ಜನಕಟ್ಟಿ, ಗಂಗಾಧರ ಬೆಟಗೇರಿ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ, ಸಂತೋಷ ಹಿರೇಮಠ ಇತರರು ಇದ್ದರು.
ಸರ್ಕಾರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಬೇಕು.– ಜಗದೀಶ ಪೂಜಾರಿ, ಅಧ್ಯಕ್ಷ ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದ ಜಿಲ್ಲಾ ಘಟಕ
ಆಕರ್ಷಕ ಬೈಕ್ ರ್‍ಯಾಲಿ
ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮಾಜಿ ಸೈನಿಕರು ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿಗೆ ಬಿಜೆಪಿ ಮುಖಂಡಾದ ಮುರುಘೇಂದ್ರಗೌಡ ಪಾಟೀಲ ಚಾಲನೆ ನೀಡಿದರು.
ಕೋಟೆಯಿಂದ ಆರಂಭವಾದ ರ‍್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ ಕೇಂದ್ರ ಬಸ್ ನಿಲ್ದಾಣ ಚನ್ನಮ್ಮ ವೃತ್ತದಿಂದ ವೇದಿಕೆ ಕಾರ್ಯಕ್ರಮದ ಧರ್ಮನಾಥ ಭವನದವರೆಗೆ ತಲುಪಿತು.
ಬೈಕ್ ರ‍್ಯಾಲಿಯಲ್ಲಿ ಅಪಾರ ಸಂಖ್ಯೆಯ ಮಾಜಿ ಸೈನಿಕರು ಪಾಲ್ಗೊಂಡು ‘ಭಾರತ್ ಮಾತಾ ಕೀ ಜೈ’ ಎಂದು ಜೈ ಘೋಷಣೆ ಮೊಳಗಿಸಿದರು. ರಸ್ತೆಯ ಪಕ್ಕದಲ್ಲಿ ನಿಂತ ಜನರು ಪುಷ್ಪವೃಷ್ಟಿ ಮಾಡಿದರು. ಬಳಿಕ ಮಾಜಿ ಸೈನಿಕರಿಂದ ಅಮರ ಜವಾನ್ ಜ್ಯೋತಿ ಗೆ ಗೌರವ ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನ ಆಚರಣೆ ಸಲ್ಲಿಸಲಾಯಿತು.
‘ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು’
ಬೆಳಗಾವಿ: ‘ಎಲ್ಲಾ ಸೇವೆಗಳಿಗೂ ಶ್ರೇಷ್ಠ ಸೇವೆ ಎಂದರೆ ಅದು ದೇಶ ಸೇವೆ. ದೇಶದ ಗಡಿಯಲ್ಲಿ ನಿಂತು ಮಳೆ ಚಳಿ ಎನ್ನದೇ ಎದುರಾಳಿ ವಿರುದ್ಧ ಹೋರಾಡುವ ಸೈನಿಕರ ಸೇವೆಗೆ ಬೆಲೆಕಟ್ಟಲಾಗದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನಗರದ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ) ಜಿಲ್ಲಾ ಘಟಕ ಆಯೋಜಿಸಿದ್ದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸೈನಿಕರು ಸೇವೆಯಲ್ಲಿದ್ದ ವೇಳೆ ಮಳೆ ಚಳಿ ಬಿಸಿಲಿನಲ್ಲಿ ದೇಶಕ್ಕಾಗಿ ಹೋರಾಡುತ್ತಾರೆ. ನಿವೃತ್ತಿರಾದರೂ ಸುಮ್ಮನೆ ಕೂರದೇ ಸಮಾಜದ ಅಂಕು ಕೊಂಡುಗಳನ್ನು ತಿದ್ದುವ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದರು. ರುದ್ರಯ್ಯ ಹಿರೇಮಠ ಸ್ವಾಮಿಗಳು ಶಾಸಕ ಆಸಿಫ್ ಸೇಠ್ ಬಸಪ್ಪ ತಳವಾರ ಯುವರಾಜ್ ಕದಂ ಮನೋಹರ್ ಬೆಳಗಾಂವ್ಕರ್ ಶಂಕರಗೌಡ ಪಾಟೀಲ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.