ಹುಕ್ಕೇರಿ: ಬೆಳಗಾವಿಗರ ಜಲದಾಹ ನೀಗಿಸುವ ಹಿಡಕಲ್ ಜಲಾಶಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಕಂಡುಬರುತ್ತಿದೆ.
‘ಕಮಲ’ ಪಾಳಯದಿಂದ ನಿಖಿಲ್ ಕತ್ತಿ ಸ್ಪರ್ಧಿಸಿದ್ದರೆ, ಎ.ಬಿ.ಪಾಟೀಲ ಅವರನ್ನು ‘ಕೈ’ ಪಡೆ ಕಣಕ್ಕಿಳಿಸಿದೆ. ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ನಿಖಿಲ್ ‘ಅನುಕಂಪ’ದ ಅಲೆ ಕೈಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದರೆ, ಹಿರಿಯ ರಾಜಕಾರಣಿ ಎ.ಬಿ.ಪಾಟೀಲ ಮತದಾರರು ‘ಅನುಭವ’ಕ್ಕೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಕ್ಷೇತ್ರದ ಜನ ಯಾರ ಕೈಹಿಡಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಉಮೇಶ ಕತ್ತಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗಲೆಲ್ಲ ‘ಪ್ರತ್ಯೇಕತೆ’ ಧ್ವನಿ ಎತ್ತಿ ಸರ್ಕಾರದ ಗಮನಸೆಳೆಯುತ್ತಿದ್ದರು. 1985ರಿಂದ 2018ರವರೆಗೆ ನಡೆದ 9 ಚುನಾವಣೆಗಳಲ್ಲಿ ಸ್ಪರ್ಧಿಸಿ, 8ರಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದರು. ಅವರ ನಿಧನದಿಂದಾಗಿ ತೆರವಾಗಿರುವ ಶಾಸಕ ಸ್ಥಾನಕ್ಕೆ ಸಾರ್ವತ್ರಿಕ ನಡೆಯುತ್ತಿರುವ ಚುನಾವಣೆ ಕಣ ರಂಗೇರಿದೆ. ಒಟ್ಟು ಏಳು ಮಂದಿ ಕಣದಲ್ಲಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳ ಉಮೇದುವಾರರ ಮಧ್ಯೆ ಹಣಾಹಣಿ ಏರ್ಪಟ್ಟಿದೆ.
ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ‘ಪ್ರಜಾವಾಣಿ’ ಸುತ್ತು ಹಾಕಿದಾಗ, ಎರಡೂ ರಾಷ್ಟ್ರೀಯ ಪಕ್ಷಗಳ ಪರ ಜನ ಒಲವು ತೋರುತ್ತಿರುವುದು ಕಂಡುಬಂತು.
ತಂದೆಯ ವರ್ಚಸ್ಸೇ ನಿಖಿಲ್‌ಗೆ ಬಲ: ಹುಕ್ಕೇರಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ಗೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆದರೆ, ಪಕ್ಷದ ವರಿಷ್ಠರು ನಿಖಿಲ್ ಅವರಿಗೆ ಮಣೆ ಹಾಕಿದೆ. ತಂದೆ ಉಮೇಶ ಕತ್ತಿ ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನೇ ಮುಂದಿಟ್ಟುಕೊಂಡು ಅವರು ಮತ ಕೇಳುತ್ತಿದ್ದಾರೆ. ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಅವರಿಗೆ ರೈತರೊಂದಿಗೆ ನೇರ ಸಂಪರ್ಕವಿದೆ. ತಂದೆಯ ವರ್ಚಸ್ಸು, ಬೂತ್ ಮಟ್ಟದಲ್ಲಿ ಗಟ್ಟಿಯಾಗಿರುವ ಪಕ್ಷದ ಸಂಘಟನೆ ಅವರ ಬಲ ಹೆಚ್ಚಿಸಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಶಿಕಾಂತ ನಾಯಿಕ, ಈಗ ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಬಿಜೆಪಿ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ‘ಕ್ಷೇತ್ರದಲ್ಲಿ ಬಿಜೆಪಿಗೆ ತನ್ನದೇಯಾದ ಶಕ್ತಿ ಇದೆ. ಕತ್ತಿ ಕುಟುಂಬ ಬೆಂಬಲಿಸುವ ಸಾವಿರಾರು ಜನರಿದ್ದಾರೆ. ಇದರಿಂದ ನಮಗೇನೂ ಹಿನ್ನಡೆಯಾಗದು’ ಎಂದು ನಿಖಿಲ್ ಕತ್ತಿ ಹೇಳುತ್ತಿದ್ದಾರೆ.
ಬಹುಜನ ಸಮಾಜ ಪಕ್ಷದಿಂದ ಬಸವರಾಜ ಕಾಂಬಳೆ, ಜೆಡಿಎಸ್‌ನಿಂದ ಬಸವರಾಜ ಪಾಟೀಲ, ಆಮ್ ಆದ್ಮಿ ಪಕ್ಷದಿಂದ ಮಂಜುನಾಥ ಗಡ್ಡೆನ್ನವರ, ಬಹುಜನ ಭಾರತ ಪಕ್ಷದಿಂದ ಘಟಿಗೆಪ್ಪ ಮಗದುಮ್ಮ ಮತ್ತು ಪಕ್ಷೇತರರಾಗಿ ಪುಂಡಲಿಕ ಕುಳ್ಳೂರ ಕಣದಲ್ಲಿದ್ದಾರೆ.
‘ಪಂಚಮಸಾಲಿ ಹೋರಾಟದಲ್ಲಿ ಎ.ಬಿ.ಪಾಟೀಲ ಕ್ರಿಯಾಶೀಲವಾಗಿ ದುಡಿದಿದ್ದಾರೆ. ಎಲ್ಲ ವರ್ಗಗಳ ಜನರೊಂದಿಗೆ ನೇರ ಸಂಪರ್ಕವಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಭರವಸೆ ಹುಟ್ಟುಹಾಕಿವೆ. ಇದು ಅವರ ಕೊನೆಯ ಚುನಾವಣೆಯೂ ಆಗಿರುವುದರಿಂದ ಕಾಂಗ್ರೆಸ್‌ಗೆ ಮತ ಕೊಡುತ್ತಿದ್ದೇವೆ’ ಎಂದು ಹುಕ್ಕೇರಿಯಲ್ಲಿ ಕೆಲವರು ಹೇಳಿದರು.
2013
ಗೆಲುವು-ಉಮೇಶ ಕತ್ತಿ(ಬಿಜೆಪಿ–81810)
ಸಮೀಪದ ಪ್ರತಿಸ್ಪರ್ಧಿ- ರವಿ ಕರಾಳೆ(ಕಾಂಗ್ರೆಸ್- 24484)
ಗೆಲುವಿನ ಅಂತರ- 57326
2018
ಗೆಲುವು- ಉಮೇಶ ಕತ್ತಿ(ಬಿಜೆಪಿ–83588)
ಸಮೀಪದ ಪ್ರತಿಸ್ಪರ್ಧಿ: ರವಿ ಕರಾಳೆ(ಕಾಂಗ್ರೆಸ್;68203)
ಗೆಲುವಿನ ಅಂತರ: 15385
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.