ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಟಿಕೆಟ್: ಡಿಕೆಶಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:45 IST
Last Updated 22 ಡಿಸೆಂಬರ್ 2021, 16:45 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಳಗಾವಿ: ‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಹಾಗೂ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಟಿಕೆಟ್‌ ಕೊಡಲಾಗುವುದು. ಗೆಲ್ಲಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪಕ್ಷದಿಂದ ಇಲ್ಲಿನ ಗಾಂಧಿ ಭವನದಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತರ ಸಮಾವೇಶ– ‘ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತರು ಮತ್ತು ನಾವೆಲ್ಲರೂ ಒಂದೇ ಎನ್ನುವವರು ನಾವು. ಆದರೆ, ಬಿಜೆಪಿಯವರು ಹಾಗೆ ಹೇಳುವುದಿಲ್ಲ. ಅದೇ ನಮಗೂ–ಅವರಿಗೂ ಇರುವ ವ್ಯತ್ಯಾಸ. ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಾಗ, ಕಾಂಗ್ರೆಸ್‌ ಎಂದಿಗೂ ನಿಮ್ಮನ್ನು ಕೈಬಿಟ್ಟಿಲ್ಲ. ಇದು ನಮ್ಮ ಬದ್ಧತೆ’ ಎಂದರು.

ADVERTISEMENT

ಇವರನ್ನು ಕೇಳಬೇಕಾ?: ‘ಬಿಜೆಪಿ ಸಂಸದರೊಬ್ಬರು, ಪಂಚರ್ ಹಾಕುವವರು ಎಂದು ನಿಮ್ಮನ್ನು ಜರಿದರು. ಕೊರೊನಾ ಸಂದರ್ಭದಲ್ಲೂ ನಿಮ್ಮತ್ತ ಬೊಟ್ಟು ಮಾಡಿದರು. ಆದರೆ, ಮುಸ್ಲಿಮರು ಕೋವಿಡ್‌ನಿಂದ ಸಾವಿಗೀಡಾದ ಎಲ್ಲ ಧರ್ಮೀಯರ ಹೆಣಗಳನ್ನೂ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದನ್ನು ಮತ್ತು ಮಾನವೀಯತೆ ಮೆರೆದಿದ್ದನ್ನು ಮರೆಯಲಾಗದು. ಇದನ್ನು ಬಿಜೆಪಿಯವರು ಮಾತನಾಡುವುದಿಲ್ಲ’ ಎಂದರು.

‘ಧರ್ಮ ಯಾವುದೇ ಇರಲಿ, ಎಲ್ಲರೂ ಒಂದೆ. ಪ್ರೀತಿಸಿದವರನ್ನು ಮದುವೆಯಾಗಲು ಇವರನ್ನು ಕೇಳಬೇಕಾ?’ ಎಂದು ಮತಾಂತರ ನಿಷೇಧ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಬದಲಾವಣೆ ತರಲು ಜನರು ನಿರ್ಧರಿಸಿದ್ದಾರೆ. ಹೀಗಾಗಿ, ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಬಿಜೆಪಿಯವರು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಹೃದಯದ ಮೇಲೆ ದಾಳಿ: ‘ಅಲ್ಪಸಂಖ್ಯಾತರ ಹೃದಯದ ಮೇಲೆ ದಾಳಿ ನಡೆಸಿ, ದೇಶವನ್ನು ಒಡೆಯಲು ಮುಂದಾಗಿದ್ದಾರೆ. ಬಿಜೆಪಿಯವರು ಕತ್ತರಿ ಕೆಲಸ ಮಾಡುತ್ತಾರೆ; ನಾವು ಸೂಜಿಯಂತೆ ಜೋಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ‘ದೇಶದ ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟರ ಸ್ಥಿತಿ ಶೋಚನೀಯವಾಗಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮುಂದುವರಿಸಬೇಕು’ ಎಂದು ಕೋರಿದರು.

ಜೆಡಿಎಸ್ ಮುಖಂಡ ರಿಯಾಜ್ ಅಹಮದ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿದರು. ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್, ರಿಜ್ವಾನ್ ಅರ್ಷದ್, ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹಮದ್, ಚನ್ನರಾಜ್ ಹಟ್ಟಿಹೊಳಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮುಖಂಡರಾದ ಖನೀಜ್ ಫಾತಿಮಾ, ರಹೀಂ ಖಾನ್, ಎ.ಬಿ. ಪಾಟೀಲ, ವೀರಕುಮಾರ ಪಾಟೀಲ, ಫಿರೋಜ್ ಸೇಠ್, ನಿಕೇತ್ ರಾಜ್, ರಾಜು ಸೇಠ್, ಓಂಕಾರ್ ಸಿಂಗ್ ಭಾಟಿಯಾ, ಧರ್ಮ ಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡಿಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.