ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 13:24 IST
Last Updated 22 ಡಿಸೆಂಬರ್ 2021, 13:24 IST
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದವರು ಸುವರ್ಣ ವಿಧಾನಸೌಧ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದವರು ಸುವರ್ಣ ವಿಧಾನಸೌಧ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.   

ಬೆಳಗಾವಿ: ‘ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಸದ್ಬಳಕೆ, ಬಿಡುಗಡೆ–ವೆಚ್ಚ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಹಣ ದುರ್ಬಳಕೆ ಕುರಿತು ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದವರು ಸುವರ್ಣ ವಿಧಾನಸೌಧ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ಅನುದಾನ ದುರ್ಬಳಕೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಿಟಿಸಿಎಲ್‌ (ಕರ್ನಾಟಕ ಎಸ್‌ಸಿ-ಎಸ್‌ಟಿ ಭೂಪರಭಾರೆ ನಿಷೇಧ) ಕಾಯ್ದೆಯ ಮೂಲ ಉದ್ದೇಶದ ಈಡೇರಿಕೆಗಾಗಿ ಮತ್ತು ಶೋಷಿತ ಸಮುದಾಯದ ಭೂ ಒಡೆತನ ರಕ್ಷಿಸುವುದಕ್ಕಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ಬಜೆಟ್‌ನಲ್ಲಿ ಘೋಷಿಸಿದಂತೆ ಡಾ.ಬಿ.ಆರ್. ಅಂಬೇಡ್ಕರ್‌ ಸ್ಫೂರ್ತಿ ಸೌಧ ಮತ್ತು ಸಂವಿಧಾನ ವಸ್ತುಸಂಗ್ರಹಾಲಯದ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ತೋಟ ಇನಾಂ, ತಳವಾರಿಕೆ, ನೀರಗಂಟಿ, ಕುಲುವಾಡಿಕೆ ಜಮೀನುಗಳನ್ನು ಪಿಟಿಸಿಎಲ್‌ ಕಾಯ್ದೆಯ ವ್ಯಾಪ್ತಿಗೆ ತಂದು ಕೂಡಲೇ ತಿದ್ದಪಡಿ ಮಾಡಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.

ADVERTISEMENT

‘ಸುವರ್ಣ ವಿಧಾನಸೌಧದ ಎದುರು ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ಬಿ. ಚನ್ನಕೃಷ್ಣಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಆರ್‌.ಎಂ.ಎಸ್. ರಮೇಶ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.