ಬೆಳಗಾವಿ: ಕಳಪೆ ದರ್ಜೆಯ ಮಿಶ್ರಣ ರಸಗೊಬ್ಬರ ಮಾರಾಟದ 14 ಪ್ರಕರಣಗಳು ಬೆಳಗಾವಿ ವಿಭಾಗದಲ್ಲಿ ಪತ್ತೆ ಆಗಿದ್ದು, ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಜಾಗೃತ ಕೋಶ ಮುಂದಾಗಿದೆ.
ಕಳಪೆದರ್ಜೆ ಎಂದು ಸಂಶಯವಿದ್ದ 15 ಮಿಶ್ರಣ ರಸಗೊಬ್ಬರಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 14 ಮಾದರಿ ಕಳಪೆ ಎಂಬುದು ದೃಢಪಟ್ಟಿದೆ.
ಅನಧಿಕೃತ ಮಾರಾಟ: ಪರವಾನಗಿ ಇಲ್ಲದೆ ರಸಗೊಬ್ಬರ ಮಾರುತ್ತಿದ್ದ 9 ಕಡೆ ದಾಳಿ ನಡೆಸಿ, ₹15.75 ಲಕ್ಷ ಮೌಲ್ಯದ 555.12 ಕ್ವಿಂಟಲ್ ರಸಗೊಬ್ಬರವನ್ನು ಜಾಗೃತ ಕೋಶ ಜಪ್ತಿ ಮಾಡಿದೆ.
ಅನಧಿಕೃತವಾಗಿ ಖರೀದಿಸಿದ್ದ ಮತ್ತು ಬಳಕೆ ಅವಧಿ ಮುಗಿದಿದ್ದ ರಸಗೊಬ್ಬರ ಮಾರುವವರು, ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು ಪ್ರಕರಣಗಳಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
‘ಬಾಗಲಕೋಟೆ ಜಿಲ್ಲೆಯಲ್ಲಿ 4 ದಾಳಿ ನಡೆಸಿ 196.35 ಕ್ವಿಂಟಲ್, ವಿಜಯಪುರದಲ್ಲಿ 2 ದಾಳಿಗಳಲ್ಲಿ 88.77 ಕ್ವಿಂಟಲ್, ಗದಗ ಜಿಲ್ಲೆಯಲ್ಲಿ 2 ದಾಳಿಗಳಲ್ಲಿ 260 ಕ್ವಿಂಟಲ್, ಬೆಳಗಾವಿಯಲ್ಲಿ ಒಂದು ಕಡೆ ದಾಳಿ ನಡೆಸಿ 10 ಕ್ವಿಂಟಲ್ ರಸಗೊಬ್ಬರ ಜಪ್ತಿ ಮಾಡಲಾಗಿದೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜ್ಯದಲ್ಲಿ ಸದ್ಯ ಯೂರಿಯಾ ಅಭಾವ ಸೃಷ್ಟಿಯಾಗಿದೆ. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡ ಕೆಲ ಕಂಪನಿಯವರು, ಮಾರಾಟಗಾರರು ಕಳಪೆ ದರ್ಜೆಯ ರಸಗೊಬ್ಬರ ಮಾರುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಆರೋಪಿಸಿದರು.
‘ಪ್ರಕರಣ ದಾಖಲಿಸಿ, ರಸಗೊಬ್ಬರ ಜಪ್ತಿ ಮಾಡಿದರಷ್ಟೇ ಸಾಲದು. ಅವರಿಗೆ ಶಿಕ್ಷೆ ನೀಡಬೇಕು. ಕಳಪೆ ರಸಗೊಬ್ಬರ ಬಳಸಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಪಡಿಸಿದರು.
125 ಕೆ.ಜಿ ಕೀಟನಾಶಕ ಜಪ್ತಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ 1ರಿಂದ ಜುಲೈ 31ರ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮಾರುತ್ತಿದ್ದ ಪ್ರಕರಣಗಳಲ್ಲಿ 125 ಕೆ.ಜಿ ಕೀಟನಾಶಕವನ್ನೂ ಜಾಗೃತ ಕೋಶವು ಜಪ್ತಿ ಮಾಡಿದೆ.
ರಸಗೊಬ್ಬರ ಕೀಟನಾಶಕವನ್ನು ಅಧಿಕೃತ ಮಾರಾಟಗಾರರಿಂದಲೇ ರೈತರು ಖರೀದಿಸಬೇಕು. ವಂಚನೆ ಕುರಿತು ಶಂಕೆ ಇದ್ದರೆ ತಕ್ಷಣವೇ ಮಾಹಿತಿ ನೀಡಬೇಕುರಾಜಶೇಖರ ಬಿಜಾಪುರ ಜಂಟಿ ಕೃಷಿ ನಿರ್ದೇಶಕ ಜಾಗೃತ ಕೋಶ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.