ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ಬಗ್ಗೆ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ. ಒಪ್ಪಿದರೆ ಮಹಾಜನ ವರದಿ ಒಪ್ಪಬೇಕು; ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರೆಯಬೇಕು ಎಂಬುದು ರಾಜ್ಯದ ದೃಢ ನಿರ್ಧಾರವಾಗಿದೆ’ ಎಂದು ಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ, ಗಡಿ ಭಾಗದ ಕನ್ನಡರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ ಮಹಾಜನ ಆಯೋಗ ರಚನೆಗೆ ನಮ್ಮ ಸರ್ಕಾರ ಒಪ್ಪಿಕೊಂಡಿದೆ. ಮಹಾಜನ ವರದಿಯೇ ಅಂತಿಮ. ಅದನ್ನು ಮಹಾರಾಷ್ಟ್ರ ಒಪ್ಪದಿದ್ದರೆ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದರು.
‘ಗಡಿ ವಿವಾದ ಸಾಂವಿಧಾನಿಕ ವಿಷಯ ಆಗಿರುವುದರಿಂದ ಅದನ್ನು ಸುಪ್ರೀಂ ಕೊರ್ಟಿನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೋ, ಭೇಡವೋ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಹಾಗಾಗಿ, ಮಹಾರಾಷ್ಟ್ರದಲ್ಲಿನ ಬೆಳವಣಿಗೆ ಕಂಡು ಗಡಿ ಕನ್ನಡಿಗರು ಚಿಂತೆಪಡಬೇಕಿಲ್ಲ’ ಎಂದರು.
‘ಕನ್ನಡ– ಮರಾಠಿಗರ ಸಾಮರಸ್ಯದ ಬದುಕು ಇಡೀ ದೇಶಕ್ಕೆ ಮಾದರಿಯಾಗಿದೆ. ಅನಗತ್ಯ ಕ್ಯಾತೆ ತೆಗೆಯುವವರು ಇದನ್ನು ಅರಿತುಕೊಂಡು, ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು’ ಎಂದೂ ಎಂಇಎಸ್‌ಗೆ ಕಿವಿಮಾತು ಹೇಳಿದರು.
‘ಗೋವಾ ಕನ್ನಡಿಗರ ಮೇಲಿನ ಅನ್ಯಾಯ ತಡೆಯಲು ಎಲ್ಲ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಲಾಗಿದೆ’ ಎಂದರು.
‘ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಕ್ರಮ ಅನುಸರಿಸಬೇಕಾಗುತ್ತದೆ. ಅದರ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು’ ಎಂದು ಸಚಿವ ಭರವಸೆ ನೀಡಿದರು.
‘ಬೆಳಗಾವಿಯೂ ಸೇರಿದಂತೆ ರಾಜ್ಯದ ಗಡಿಯಲ್ಲಿರುವ ಕನ್ನಡ ಶಾಲೆಗಳನ್ನು ಸದೃಢಗೊಳಿಸಲು ಅಗತ್ಯ ಕ್ರಮಗಳ ಬಗ್ಗೆ ಬೆಳಗಾವಿ ನಿಯೋಗದೊಂದಿಗೆ ಶಿಕ್ಷಣ ಸಚಿವರ ಜತೆ ಚರ್ಚಿಸಲಾಗವುದು. ಇಲ್ಲಿನ ಎಲ್ಲ ಸಂಘಟನೆಗಳು ಸೇರಿಕೊಂಡು ಒಂದು ವರದಿ ನೀಡಬೇಕು’ ಎಂದೂ ಸಲಹೆ ನೀಡಿದರು.
‘ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮೈಸೂರು ದಸರಾ ಮಾದರಿಯಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂಬುದು ನ್ಯಾಯಯುತ ಬೇಡಿಕೆ. ಇದನ್ನು ಪರಿಶೀಲಿಸಲಾಗುವುದು’ ಎಂದೂ ಅವರು ಭರವಸೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಕನ್ನಡ ಪರ ಸಂಘಟನೆಗಳ ಮುಖಂಡರು
ಬೆಳಗಾವಿಯಲ್ಲಿ ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಕನ್ನಡ ಪರ ಸಂಘಟನೆಗಳ ಸಭೆ ನಡೆಸಿದರು. ಡಾ.ಭೀಮಾಶಂಕರ ಗುಳೇದ, ಮೊಹಮ್ಮದ್ ರೋಷನ್, ಅಶೋಕ ಚಂದರಗಿ, ವಿಶ್ವಾಸ ವೈದ್ಯ ಅವರೂ ಪಾಲ್ಗೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.