ADVERTISEMENT

ಮುಳುಗುವ ಹಡಗಿನಲ್ಲಿ ಕೂರುತ್ತಾರೆಯೇ? ಕಾಂಗ್ರೆಸ್‌ ನಾಯಕರಿಗೆ ಕಾರಜೋಳ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 14:26 IST
Last Updated 25 ಜನವರಿ 2022, 14:26 IST
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ   

ಬೆಳಗಾವಿ: ಮುಳುಗುವ ಹಡಗಿನಲ್ಲಿ ಯಾರಾದರೂ ಕೂರುತ್ತಾರೆಯೇ?– ‘ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್‌ನವರ ಮೋಸ ದಂಧೆ ನಡೆಯುವುದಿಲ್ಲ. ಇದರಿಂದಾಗಿಯೇ ಅವರು ಅಧಿಕಾರ ಕಳೆದುಕೊಂಡು ಕುಳಿತಿದ್ದಾರೆ. ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 5 ರಾಜ್ಯಗಳ ಚುನಾವಣೆ ಮುಗಿದ ನಂತರ ಮತ್ತಷ್ಟು ಕಿತ್ತುಕೊಂಡು ಹೋಗಲಿದೆ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತದೆ ಎಂದರು.

ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ರೆ ಮಾಡಿ ಈಗ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪಾದಯಾತ್ರೆ ನಡೆಸಿದರೆ ಆಗುವ ಲಾಭವೇನು? ಎಂದು ಕಾಂಗ್ರೆಸ್‌ ನಾಯಕರನ್ನು ಛೇಡಿಸಿದರು. ಜನರಿಗೆ ಮೋಸ ಮಾಡುವ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ನಾಯಕರು ಉತ್ತರ ಹೇಳಲಿ ಎಂದು ಸವಾಲೆಸೆದರು.

ADVERTISEMENT

ಕೃಷ್ಣಾ ಮೇಲ್ದಂಡೆ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳು ನ್ಯಾಯಾಲಯದಲ್ಲಿವೆ. ಅಲ್ಲಿಂದಲೇ ನ್ಯಾಯ ಪಡೆದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಕಾಂಗ್ರೆಸ್‌ನವರು 2013ರ ಜ.7ರಿಂದ ಜ.14ರವರೆಗೆ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ (ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ) ನಡೆಸಿದ್ದರು. ನಮಗೆ ಅಧಿಕಾರ ಕೊಡಿ, 5 ವರ್ಷಗಳಲ್ಲಿ 130 ಟಿಎಂಸಿ ನೀರನ್ನು ಬಳಸಿಕೊಂಡು 7 ಜಿಲ್ಲೆಗಳಲ್ಲಿ ನೀರಾವರಿಗೆ ಅನುಕೂಲ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಸರ್ಕಾರ ಬಂದಾಗ ನಿದ್ರೆ ಮಾಡಿ ಹೋದರು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.