ADVERTISEMENT

ಮುಖ್ಯಮಂತ್ರಿ ಬದಲಾವಣೆ ಇಲ್ಲ: ಸಚಿವ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 10:37 IST
Last Updated 26 ಡಿಸೆಂಬರ್ 2020, 10:37 IST
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ   

ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶನಿವಾರ ಹೇಳಿದರು.

'ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲ, ಮಹತ್ವದ ಬದಲಾವಣೆ ಆಗಲಿದೆ' ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅವರ ಹೇಳಿಕೆ ಪ್ರತಿಕ್ರಿಯೆ ನೀಡುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ ಎಂದರು.

'ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಮಾತನಾಡಬೇಡಿ ಎಂದು ನನ್ನ ಹಿತೈಷಿಗಳು ಹೇಳಿದ್ದಾರೆಯೇ ಹೊರತು ಪಕ್ಷದ ವರಿಷ್ಠರಲ್ಲ. ನಮ್ಮ ಪಕ್ಷದ ವರಿಷ್ಠರು ಸೂಚನೆ ಕೊಡುವಷ್ಟು ದೊಡ್ಡ ನಾಯಕಿಯೇನಲ್ಲ ಅವರು' ಎಂದರು.

ADVERTISEMENT

'ಗ್ರಾಮೀಣ ಕ್ಷೇತ್ರದಲ್ಲಿ ನಿಮ್ಮ‌ ಅಭಿಮಾನಿಗಳು ಕಟ್ಟಿಕೊಂಡಿರುವ ಸಾಹುಕಾರ್ ಪಡೆಯವರು ಕ್ಯಾಲೆಂಡರ್ ಹಂಚುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಹಂಚುವುದು ಮಹಾಪರಾಧವೇ? ಆ ಕ್ಷೇತ್ರವನ್ನು ವಶ ಮಾಡಿಕೊಳ್ಳಬೇಕೆಂಬ ಸಂಕಲ್ಪ ನಮ್ಮದಾಗಿದೆ. ಗೆಲ್ಲಲು ಏನು ಬೇಕೋ ಅದನ್ನು ಮಾಡುತ್ತೇವೆ. ಸ್ಥಳೀಯ ಶಾಸಕರು ನಾವೆಲ್ಲ ಸೇರಿ ನೀರಾವರಿಗೆ ಒತ್ತು ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ ಪುತ್ರಿ ಪಾಲ್ಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಂಗಡಿ ಪತ್ನಿಗೆ ಟಿಕೆಟ್ ನೀಡಿದರೆ ಒಳ್ಳೆಯದು ಎಂದು ವರಿಷ್ಠರಿಗೆ ತಿಳಿಸಿದ್ದೇನೆ. ಅವರು ಮಾಡುವ ತೀರ್ಮಾನಕ್ಕೆ ‌ಬದ್ಧವಾಗಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.