ADVERTISEMENT

ಸುರೇಶ ಅಂಗಡಿ ಇದ್ದಿದ್ದರೆ ದೊಡ್ಡ ಸ್ಥಾನಕ್ಕೆ ಹೋಗುತ್ತಿದ್ದರು: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 11:52 IST
Last Updated 25 ಅಕ್ಟೋಬರ್ 2020, 11:52 IST
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ   

ಬೆಳಗಾವಿ: ‘ಸುರೇಶ ಅಂಗಡಿ ಬದುಕಿದ್ದರೆ ಎರಡು ಮೂರು ತಿಂಗಳಲ್ಲಿ ದೊಡ್ಡ ಹುದ್ದೆಗೆ ಏರುತ್ತಿದ್ದರು. ಬಹಳ ಉತ್ತಮವಾದ ಭವಿಷ್ಯ ಅವರಿಗಿತ್ತು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿ ಭಾನುವಾರ ನಡೆದ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಂಗಡಿ ಅವರಿಗೆ ಬಹಳ ವಿಚಿತ್ರವಾದ ಬುದ್ಧಿಶಕ್ತಿ ಇತ್ತು. ಒಳ್ಳೆಯ ನಾಯಕರಾಗಿದ್ದರು. ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ. ಇದನ್ನು ಒಪ್ಪಬೇಕಾಗುತ್ತದೆ’ ಎಂದರು.

ADVERTISEMENT

‘ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬರಲಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ನಾವೆಲ್ಲರೂ ಗೌರವಿಸಬೇಕು. ಆದರೆ, ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿಗೆ 2 ಲಕ್ಷ ಲೀಡ್ ಕೊಡಬೇಕು ಎನ್ನುವ ದೃಢ ಸಂಕಲ್ಪ ಮಾಡಬೇಕು. ಇದಕ್ಕಾಗಿ ಈಗಿನಿಂದಲೇ ಸಿದ್ಧವಾಗಬೇಕು. ವಿರೋಧಿಗಳಿಗೆ ಪಾಠ ಕಲಿಸಬೇಕು’ ಎಂದು ಸೂಚಿಸಿದರು.

‘ಹೋದ ಲೋಕಸಭಾ ಚುನಾವಣೆಯಲ್ಲಿ ನಾನು ಒಳಗೆ ಕುಳಿತು ಕೆಲಸ ಮಾಡಿದ್ದೆ. ಕಾಂಗ್ರೆಸ್‌ನಲ್ಲಿದ್ದರೂ ನಾನು ಕಾರ್ಯಕರ್ತರನ್ನು ಫ್ರೀ ಬಿಟ್ಟಿದ್ದೆ. ನಾನು ಕಾಂಗ್ರೆಸ್ ಶಾಸಕನಾಗಿದ್ದರೂ ಬಳ್ಳಾರಿಯಲ್ಲಿ ನನ್ನ ಮಾವನಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದೆ. ಇಲ್ಲಿಂದ ಅಲ್ಲಿಗೆ 1200 ಮಂದಿ ಹೋಗಿ ಪ್ರಚಾರ ಮಾಡಿದ್ದೆವು. ಅಲ್ಲಿ ನಾವು ಮಾಡಿದ್ದ ಚುನಾವಣೆ ನೋಡಿ ನಮ್ಮಂತೆಯೇ ಕೇಡರ್ ತಯಾರಿ ಮಾಡಿದ್ದೀರಿ ಎಂದು ಆರ್ ಎಸ್ ಎಸ್ ಹಾಗೂ ಬಿಜೆಪಿಯ ಹಿರಿಯ ನಾಯಕರೇ ನನಗೆ ಹೇಳಿದ್ದರು. ಗೋಕಾಕದಲ್ಲಿ ಈಗ ಬಿಜೆಪಿ, ಆರ್ ಎಸ್ ಎಸ್ ಹಾಗೂ ಕಾರ್ಯಕರ್ತರು ಒಗ್ಗೂಡಿದ್ದೇವೆ. 5ರಿಂದ 6 ಲಕ್ಷ ಮತಗಳ ದೊಡ್ಡ ಅಂತರದಿಂದ ಗೆಲ್ಲಿಸುವ ಮೂಲಕ ಸುರೇಶ ಅಂಗಡಿ ಅವರ ಆತ್ಮಕ್ಕೆ ಶಾಂತಿ ನೀಡಬೇಕು’ ಎಂದು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಕ್ಷ ರಾಷ್ಟ್ರದಾದ್ಯಂತ ವಿಸ್ತಾರವಾಗಿ ಬೆಳೆಯುತ್ತಿದೆ. ದೊಡ್ಡ ಕಾರ್ಯಕರ್ತರ ಪಡೆ ಇದೆ. ಬಹಳ ಶಿಸ್ತಿನಿಂದ ಇರುವಂತಹ ಪಕ್ಷ. ಸಾಮಾನ್ಯ ಕಾರ್ಯಕರ್ತರಿಗೂ ಇಲ್ಲಿ ಬಹಳ ಮಾನ್ಯತೆ ಇದೆ. ಯಾವುದೇ ಸಾಮಾನ್ಯ ಕಾರ್ಯಕರ್ತ ಯಾವಾಗ ಬೇಕಾದರೂ ದೊಡ್ಡ ಹುದ್ದೆ ಪಡೆಯಬಹುದು. ಪಕ್ಷದ ತೀರ್ಮಾನಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳದಲ್ಲಿ ಕುಟುಂಬ ರಾಜಕಾರಣ ಇರುವುದನ್ನು ನೋಡಿದ್ದೇನೆ. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಹೇಗೆಲ್ಲಾ ನಡೆಯುತ್ತದೆ ಎನ್ನುವುದನ್ನು ಕಂಡಿದ್ದೇವೆ. ಅಲ್ಲಿ ಏನೇನ್ ನಡೆಯುತ್ತದೆ ಎನ್ನುವುದು ಗೊತ್ತಿದೆ ಎಂದರು.

‘ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುತಂತ್ರ ರಾಜಕಾರಣದ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಪದಾಧಿಕಾರಿಗಳು ಮಾಡಬೇಕು. ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ಬಹಳ ಅನುಕೂಲವಾಗಿದೆ. ಕೃಷಿಕರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರುವುದಕ್ಕೆ ಅವಕಾಶವಿದೆ. ಇದೆಲ್ಲವನ್ನೂ ಮನೆ ಮನೆಗಳಿಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.