ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ತಾಲ್ಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ತಾಲ್ಲೂಕಿನಾದ್ಯಂತ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿದೆ. ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿಯ ಸೇತುವೆಯ, ಸಿಂಧನೂರು-ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ದೇವಾಚಿಹಟ್ಟಿ-ಜಾಂಬೋಟಿ ಮಾರ್ಗಗಳ ಸೇತುವೆ ಸೇರಿದಂತೆ ನೇರಸಾ-ಗವ್ವಾಳಿ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ದೇವಾಚಿಹಟ್ಟಿ-ತೋರಾಳಿ, ತಿವೋಲಿ-ಶಿರೋಲಿ, ಅಮಟೆ-ಗೋಲ್ಯಾಳಿ, ಹೆಮ್ಮಡಗಾ-ದೇಗಾಂವ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಯಡೋಗಾ-ಚಾಪಗಾಂವ, ಮಾಚಾಳಿ-ಲೋಂಡಾ ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.
ತಾಲ್ಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ ಅರಣ್ಯಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದ ಕಾರಣ ಈ ಅರಣ್ಯಗಳ ವ್ಯಾಪ್ತಿಯ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸತತಧಾರೆಯಿಂದಾಗಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಮತ್ತಿತರ ಹಳ್ಳಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿದ ಸ್ಥಿತಿಯಲ್ಲಿವೆ. ಭಾರೀ ಮಳೆ-ಗಾಳಿಯಿಂದಾಗಿ ತಾಲ್ಲೂಕಿನ ಅರಣ್ಯ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ತಾಲ್ಲೂಕಿನ ಶಿರೋಲಿ, ತಿವೋಲಿ, ಮಂಗೇನಕೊಪ್ಪ, ಕಣಕುಂಬಿ, ದೇವಲತ್ತಿ, ಕಾಮಶಿನಕೊಪ್ಪ, ಲೋಕೊಳಿ ಮತ್ತು ಬಿದರಭಾವಿ ಗ್ರಾಮಗಳಲ್ಲಿ ತಲಾ ಒಂದು ಮನೆಗೋಡೆಗಳು ಕುಸಿದು ಧರೆಗುರುಳಿದಿವೆ.
ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಗುರುವಾರದ ವರೆಗೆ ತಾಲ್ಲೂಕಿನ ಕಣಕುಂಬಿಯಲ್ಲಿ 13.5 ಸೆಂ.ಮೀ, ಅಸೋಗಾದಲ್ಲಿ 9.06 ಸೆಂ.ಮೀ, ಗುಂಜಿಯಲ್ಲಿ 6.54 ಸೆಂ.ಮೀ, ಲೋಂಡಾದಲ್ಲಿ 8.6 ಸೆಂ.ಮೀ, ನಾಗರಗಾಳಿಯಲ್ಲಿ 6.3 ಸೆಂ.ಮೀ, ಜಾಂಬೋಟಿಯಲ್ಲಿ 9.34 ಸೆಂ.ಮೀ ಮತ್ತು ಖಾನಾಪುರಲ್ಲಿ 7.43 ಸೆಂ.ಮೀ, ಬೀಡಿಯಲ್ಲಿ 3.28 ಸೆಂ.ಮೀ ಮತ್ತು ಕಕ್ಕೇರಿಯಲ್ಲಿ 1.48 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.