ADVERTISEMENT

ಕೌಜಲಗಿ: ಬಯಲಾಟ ಕಲಾವಿದೆಗೆ ರಾಜ್ಯೋತ್ಸವ ಗರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 14:41 IST
Last Updated 28 ಅಕ್ಟೋಬರ್ 2020, 14:41 IST
ಕೆಂಪವ್ವ ಹರಿಜನ
ಕೆಂಪವ್ವ ಹರಿಜನ   

ಕೌಜಲಗಿ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಮೂಡಲಗಿ ತಾಲ್ಲೂಕಿನ ಅರಭಾವಿಯಸಂಗ್ಯಾ-ಬಾಳ್ಯಾ ಸಣ್ಣಾಟದ (ಬಯಲಾಟ) ಕಲಾವಿದೆ ಕೆಂಪವ್ವ ಯಲ್ಲಪ್ಪ ಹರಿಜನ ಭಾಜನರಾಗಿದ್ದಾರೆ.

ಬಡ ಕುಟುಂಬದ ಯಲ್ಲಪ್ಪ-ದೇವಕಿ ಅವರ ಮಗಳಾಗಿ 1954ರ ಜೂನ್‌ 1ರಲ್ಲಿ ಅವರು ಜನಿಸಿದರು. ಬಾಲ್ಯದಿಂದಲೂ ಬಯಲಾಟಗಳ ಪ್ರದರ್ಶನಗಳನ್ನು ಕಂಡು ಆನಂದಿಸಿ ಬೆಳೆದ ಕೆಂಪವ್ವ, ಬಳಿಕ ರಂಗ ಪ್ರವೇಶಿಸಿದರು. ಸುಮಧುರವಾದ ಕಂಠ-ಮಾಧುರ್ಯ-ರೂಪ-ಲಾವಣ್ಯಗಳನ್ನು ಹೊಂದಿದ ಕೆಂಪವ್ವ, ಸಂಗ್ಯಾ–ಬಾಳ್ಯಾ ಸಣ್ಣಾಟದ ಗಂಗಾ ಪಾತ್ರದಲ್ಲಿ ಮಿಂಚಿದರು. ಗಂಗಾ ಪಾತ್ರಾಭಿನಯದೊಂದಿಗೆ ರಾಧಾನಾಟದ ಚಿಮನಾ ಪಾತ್ರಕ್ಕೂ ಜೀವ ತುಂಬಿದ ಕಲಾವಿದೆ ಅವರು.

ನಾಲ್ಕು ದಶಕಕಕ್ಕೂ ಹೆಚ್ಚಿನ ಸಮಯದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಯುವ ಕಲಾವಿದರಿಗೆ ಬಯಲಾಟಗಳ ಮಾರ್ಗದರ್ಶನ ನೀಡುತ್ತಿರುವ ಅವರು, ಮಗಳು ಲಕ್ಷ್ಮಿಗೆ ಸಂಗ್ಯಾ-ಬಾಳ್ಯಾ ಕಲೆ ಕಲಿಸಿದ್ದಾರೆ. ಅವರ ಕಲಾ ಪ್ರತಿಭೆ ಪುರಸ್ಕರಿಸಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳು ಸಂದಿವೆ.

ADVERTISEMENT

2019ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ) ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಕೆಂಪವ್ವ ಅವರಿಗೆ ಈಗ ರಾಜ್ಯೋತ್ಸವ ಪ್ರಶಸ್ತಿಯ ಗರಿ.

‘ಪ್ರಶಸ್ತಿ ಸಿಕ್ಕಿರುವುದರಿಂದ ಬಹಳ ಖುಷಿಯಾಗಿದೆ. ಹೆಮ್ಮೆಯೂ ಆಗಿದೆ. ಇಷ್ಟು ವರ್ಷಗಳು ಕಲಾ ಸೇವೆ ಮಾಡಿದ್ದಕ್ಕೆ ಸಾರ್ಥಕ ಎನಿಸಿದೆ. ದುಡಿದಿದ್ದಕ್ಕೆ ಫಲ ಸಿಕ್ಕಂತಾಗಿದೆ. ಈ ಕಲೆ ಉಳಿಯಬೇಕು–ಬೆಳೆಯಬೇಕು’ ಎನ್ನುವುದು ನನ್ನ ಆಸೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.