ADVERTISEMENT

ಖಾನಾಪುರದ ಮುಸ್ಲಿಂ ಯುವಕನ ಕೊಲೆ: ತನಿಖೆಯ ಹಾದಿ ತಪ್ಪದಂತೆ ನೋಡಿಕೊಳ್ಳಲು ಆಗ್ರಹ

ಜಿಲ್ಲಾ ಪೊಲೀಸರಿಗೆ ವಿವಿಧ ಸಂಘಟನೆಗಳ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 10:05 IST
Last Updated 18 ಅಕ್ಟೋಬರ್ 2021, 10:05 IST
   

ಬೆಳಗಾವಿ: ‘ಹಿಂದೂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಕೊಲೆಯಾದ ಖಾನಾಪುರದ ಯುವಕ ಅರ್ಬಾಜ್‌ ಮುಲ್ಲಾ ಪ್ರಕರಣದ ತನಿಖೆ ಯಾವುದೇ ಕಾರಣಕ್ಕೂ ಹಾದಿ ತಪ್ಪದಂತೆ ಪೊಲೀಸರು ಎಚ್ಚರ ವಹಿಸಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಆಗ್ರಹಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದರೆ ನಿಜಕ್ಕೂ ಆಘಾತಕಾರಿ ವಿಷಯವೇ ಸರಿ’ ಎಂದರು.

‘ಪ್ರೀತಿಸುವ ಹಾಗೂ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಏನಾದರೂ ತಪ್ಪಾದಲ್ಲಿ ಕಾನೂನು ಪ್ರಕಾರ ಕ್ರಮ ವಹಿಸಲು ಪೊಲೀಸ್ ಇಲಾಖೆ ಇದೆ. ಅರ್ಬಾಜ್‌ ಮುಲ್ಲಾ ಕೊಲೆ ‍ಪ್ರಕರಣದಲ್ಲಿ ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆಯವರು ಭಾಗಿಯಾಗಿರುವುದು, ಅವರಿಗೆ ಮನುಷ್ಯರ ಪ್ರಾಣ ಮತ್ತು ಸಂವಿಧಾನದ ತತ್ವಗಳ ಮೇಲಿರುವ ಅಗೌರವವನ್ನು ಸೂಚಿಸುತ್ತದೆ. ಜನಪರ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ಸಂಘಟನೆಗಳ ನಾವು ಪ್ರೀತಿಸುವುದನ್ನು ತಪ್ಪೆನ್ನುವ ಹಾಗೂ ಪ್ರೀತಿಸಿದ್ದಕ್ಕಾಗ ಕೊಲೆ ಮಾಡುವಂತಹ ಹೀನಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

ಶಾಂತಿ ಕದಡಲು

‘ನೈತಿಕ ಪೊಲೀಸ್ ಹೆಸರಲ್ಲಿ ಶಾಂತಿ ಕದಡುವ ಚಟುವಟಿಕೆಗಳು ನಡೆಯುತ್ತಿವೆ. ಹೀಗಿರುವಾಗ, ಮತೀಯ ಗುಂಡಾಗಿರಿ ವಿಷಯದ ಪ್ರಶ್ನೆಗೆ ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿರುವುದು ಖಂಡನೀಯ. ಈ ಮೂಲಕ ಅವರು ಅಂತಹ ಕೃತ್ಯಗಳನ್ನು ನಡೆಸುವವರಿಗೆ ಕುಮ್ಮಕ್ಕು ನೀಡಿದ್ದಾರೆ. ಇದು, ಸಮಾಜದ ಸೌಹಾರ್ದದ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು.

‘ಜ್ಯಾತ್ಯತೀತ ಮತ್ತು ವೈವಿಧ್ಯದ ಹೆಮ್ಮೆ ಹೊಂದಿರುವ ದೇಶದಲ್ಲಿ ಮುಸ್ಲಿಮರು ಬೇರೆ ಧರ್ಮದವರನ್ನು ಪ್ರೀತಿಸಲು ಅಥವಾ ಜೊತೆಯಲ್ಲಿ ಓಡಾಡಲು ಹೆದರುವಂತಹ ಪರಿಸ್ಥಿತಿ ಬಂದಿರುವುದನ್ನು ನೋಡಿದರೆ ನಿಜಕ್ಕೂ ವಿಷಾದವೆನಿಸುತ್ತದೆ’ ಎಂದು ಹೇಳಿದರು.

ಒತ್ತಡಕ್ಕೆ ಮಣಿಯಬಾರದು

‘ಅರ್ಬಾಜ್‌ ಕೊಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ, ಕೋಮು ಶಕ್ತಿಗಳ ಒತ್ತಡಕ್ಕೆ ಮಣಿಯದೆ ತಪ್ಪತಸ್ಥರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಧರ್ಮ–ಧರ್ಮಗಳ ನಡುವೆ ವಿಷದ ಬೀಜ ಬಿತ್ತುತ್ತಿರುವ ಧರ್ಮಾಂಧ, ಮನುಷ್ಯ ವಿರೋಧಿ ಬಲಪಂಥೀಯ ಗುಂಪುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿ ತಮ್ಮ ಮಾತನ್ನು ಹಿಂಪಡೆಯಬೇಕು ಅಥವಾ ರಾಜೀನಾಮೆ ನೀಡಬೇಕು. ಕೊಲೆಯಾದ ಅರ್ಬಾಜ್‌ ತಾಯಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆ ಕೊಡಬೇಕು. ಮರ್ಯಾದಾ ಹತ್ಯೆಗಳ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸ್ಪಂದನ ಸಂಘಟನೆಯ ಕಾರ್ಯದರ್ಶಿ ವಿ.ಸುಶೀಲಾ, ‘ಮನುಷ್ಯ ಧರ್ಮ ಎಲ್ಲಕ್ಕಿಂತಲೂ ದೊಡ್ಡದು ಎನ್ನುವುದನ್ನು ಮರೆಯಬಾರದು. ಪ್ರೀತಿಸಿದ್ದಕ್ಕಾಗಿ ಕೊಲ್ಲುವಂತಹ ಘಟನೆಗಳು ಮರುಕಳಿಸದಂತೆ ‍ಪೊಲೀಸರು ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಜಾಗೃತ ಮಹಿಳಾ ಒಕ್ಕೂಟದ ಶಾರದಾ ಗೋಪಾಲ, ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ಸಿಐಟಿಯು ನಾಯಕಿ ಮಂದಾ ನೇವಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.