ADVERTISEMENT

ಖಾನಾಪುರ ತಾಲ್ಲೂಕಿನ ವಿವಿಧೆಡೆ ಕಳ್ಳತನ: ಲಕ್ಷಾಂತರ ಮೌಲ್ಯದ ನಗ-ನಾಣ್ಯ ದರೋಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 3:55 IST
Last Updated 15 ಅಕ್ಟೋಬರ್ 2025, 3:55 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಖಾನಾಪುರ: ತಾಲ್ಲೂಕಿನ ಹಲವೆಡೆ ಭಾನುವಾರ ಒಂದೇ ರಾತ್ರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನದ ಯತ್ನ ನಡೆದಿದ್ದು, ಕಳ್ಳರ ಗುಂಪು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿ ದರೋಡೆ ನಡೆಸಲು ಪ್ರಯತ್ನಿಸಿದೆ.

ಈ ಘಟನೆಯಿಂದ ತಾಲ್ಲೂಕಿನಲ್ಲಿ ಭಯದ ವಾತಾವರಣ ಉಂಟಾಗಿದೆ. ಪೊಲೀಸರು ರಾತ್ರಿಯ ಪೆಟ್ರೋಲಿಂಗ್ ಹೆಚ್ಚಿಸಿ ಕಳ್ಳರ ಪತ್ತೆಗೆ ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಗಣೇಬೈಲ, ಶಿಂಪೇವಾಡಿ, ಗುಂಜಿ, ಸಾವರಗಾಳಿ ಗ್ರಾಮಗಳ ಹಲವು ಮನೆಗಳಿಗೆ ಕಳ್ಳರು ಕನ್ನಹಾಕಿ ನಗ-ನಾಣ್ಯ ದೋಚಿದ್ದಾರೆ. ಸಾವರಗಾಳಿ ಗ್ರಾಮದ ನಾರಾಯಣ ಭೇಕಣೆ ಅವರ ಮನೆಯ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.

ADVERTISEMENT

ಸಾವರಗಾಳಿ ಗ್ರಾಮದ ಬಾಳು ಘಾಡಿ, ಗುಂಜಿ ಗ್ರಾಮದ ದೇವಪ್ಪ ನೆರಸೇಕರ, ಮಲ್ಲಪ್ಪ ಜಪಾಟೆ, ನಾಮದೇವ ಪಾಟೀಲ ಮತ್ತು ತುಕಾರಾಮ ಘಾಡಿ ಅವರ ಮನೆಗಳ ಬೀಗವನ್ನು ಮುರಿದು ಒಳಗೆ ನುಗ್ಗಿರುವ ಕಳ್ಳರು ನಗ-ನಾಣ್ಯಕ್ಕಾಗಿ ಶೋಧ ನಡೆಸಿದ್ದಾರೆ.

ಶಿಂಪೇವಾಡಿ ಗ್ರಾಮದ ಸಚೀನ ಕಂಗ್ರಾಳಕರ, ಬಬನ ಪಾಟೀಲ, ಕೃಷ್ಣ ಪಾಟೀಲ ಅವರ ಮನೆಗಳಿಗೆ ಕನ್ನ ಹಾಕಿ ಶೋಧಕಾರ್ಯ ನಡೆಸಿದ್ದಾರೆ. ಈ ಮನೆಗಳಲ್ಲಿ ಅಲ್ಪಪ್ರಮಾಣದಲ್ಲಿ ಕಳ್ಳತನ ನಡೆದ ವರದಿಯಾಗಿದೆ. ಬಹುತೇಕ ಎಲ್ಲೆಡೆ ಬೀಗ ಜಡಿದ ಮನೆಗಳನ್ನು ಕಳ್ಳರು ಗುರಿಯಾಗಿಸಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ರಾತ್ರಿ 1 ಗಂಟೆಯಿಂದ ನಸುಕಿನ ಜಾವ 4ರ ಅವಧಿಯಲ್ಲಿ ಈ ಕಳ್ಳತನದ ಪ್ರಕರಣಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ತಾಲೂಕಿನ ಗಣೇಬೈಲ ಗ್ರಾಮದ ಬೆಳಗಾವಿ-ಪಣಜಿ ಹೆದ್ದಾರಿ ಪಕ್ಕದ ಕೆಲ ಮನೆಗಳ ಬೀಗ ಮುರಿಯುವ ಪ್ರಯತ್ನವನ್ನು ಕಳ್ಳರು ನಡೆಸಿದ್ದಾರೆ. ಪಟ್ಟಣದ ಹೊರವಲಯದ ಚಂದ್ರಶೇಖರ ಶೆಟ್ಟಿ ಅವರ ಮನೆಯ ಗೇಟ್ ನೆಗೆದು ಒಳಪ್ರವೇಶಿಸಿ ಕಳ್ಳತನದ ಯತ್ನ ನಡೆಸಿದ್ದಾರೆ. ಶೆಟ್ಟಿ ಅವರ ಮನೆಯಲ್ಲಿ ಇಂಟರಲಾಕ್ ಸಿಸ್ಟಮ್ ಇದ್ದುದನ್ನು ಗಮನಿಸಿದ ಕಳ್ಳರು ಅವರ ಮನೆಯಿಂದ ಹೊರನಡೆದಿದ್ದಾರೆ.

ಕಳ್ಳತನದ ಘಟನೆಯ ಮಾಹಿತಿ ಪಡೆದ ಖಾನಾಪುರ ಮತ್ತು ನಂದಗಡ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶ್ವಾನಪಡೆ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.