ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಖಾನಾಪುರ– ಗೋವಾ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ಉಯ್ಯಾಲೆಯಂತಾಗಿದೆ. ಪ್ರತಿ ದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇದೆ.
ರಸ್ತೆ ಹಾಳಾಗಿ ಹಲವು ವರ್ಷ ಕಳೆದರು ಅಭಿವೃದ್ಧಿಗೊಂಡಿಲ್ಲ. ಮಳೆಗಾಲಕ್ಕೊಮ್ಮೆ ಗುಂಡಿಗಳಿಗೆ ಕಲ್ಲು– ಮಣ್ಣು ಸುರಿದು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ವದಗಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಭಾರಿ ಮಳೆ ಮತ್ತು ಅತಿಯಾದ ವಾಹನಗಳ ಸಂಚಾರದಿಂದ ಎರಡೇ ದಿನಕ್ಕೆ ಮತ್ತೆ ಗುಂಡಿಗಳು ಬಾಯ್ತೆರೆದು ಸಂಚಾರಕ್ಕೆ ಕಂಟಕವಾಗಿ ಕಾಡುತ್ತಿವೆ. ಜನರ ಸಮಸ್ಯೆ ಆಡಳಿತ ವರ್ಗಕ್ಕೆ ಕಾಣಿಸುತ್ತಿಲ್ಲವೇ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಗೆ ಇನ್ನೆಷ್ಟು ವರ್ಷ ಕಾಯಬೇಕೆಂದು ಪ್ರಶ್ನಿಸುತ್ತಿದ್ದಾರೆ.
ಪ್ರವಾಸಿ ತಾಣದ ರಸ್ತೆ:
ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿಯಿರುವ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಿಂದ ಖಾನಾಪುರ ಮತ್ತು ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಕಿತ್ತೂರು ಮತಕ್ಷೇತ್ರದ ಗಡಿ ರಸ್ತೆಯಾಗಿದೆ. ಎಂ.ಕೆ.ಹುಬ್ಬಳ್ಳಿಯಿಂದ ಕೇವಲ 5ಕಿ.ಮೀ ಸಾಗಿದರೆ ಖಾನಾಪುರ ಮತಕ್ಷೇತ್ರದ ರಸ್ತೆ ಆರಂಭವಾಗುತ್ತದೆ. ಆ ರಸ್ತೆ ಕೆಲವರ್ಷಗಳ ಹಿಂದೆ ಅಭಿವೃದ್ಧಿಗೊಂಡಿದ್ದು, ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಯ 5 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ, ವಾಹನ ಸಂಚಾರ ಇಲ್ಲಿ ದುಸ್ತರವಾಗಿದ್ದು, ಬೇಗನೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬುದು ಸ್ಥಳೀಯರ ಮತ್ತು ಪ್ರಯಾಣಿಕರ ಆಗ್ರಹ.
ಎಂ.ಕೆ.ಹುಬ್ಬಳ್ಳಿ, ಚನ್ನಮ್ಮನ ಕಿತ್ತೂರು ಹಾಗೂ ಖಾನಾಪುರಗಳು ಪ್ರವಾಸಿ ತಾಣಗಳಾಗಿದ್ದರಿಂದ ಈ ಮಾರ್ಗದಲ್ಲಿ ಪ್ರತಿದಿನವೂ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ, ತಗ್ಗು– ಗುಂಡಿಗಳಲ್ಲಿ ಸಾಗುವ ವಾಹನದಿಂದ ಜನ ಮೈ ಕೈ ನೋವು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.
ಕಾರ್, ಬೈಕ್, ಟ್ರ್ಯಾಕ್ಟರ್, ಚಕ್ಕಡಿಗಳ ಸಂಚಾರ ಕಷ್ಟ:
ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅನುಕೂಲಕರ ರಸ್ತೆ ಇದಾಗಿರುವುದರಿಂದ ಪ್ರತಿದಿನ ರಾಜ್ಯದ ವಾಹನಗಳಷ್ಟೆ ಅಲ್ಲದೇ ಹೊರರಾಜ್ಯದ ನೂರಾರು ವಾಹನಗಳು ಈ ರಸ್ತೆ ಮೂಲಕವೇ ಸಾಗುತ್ತವೆ. ಆದರೆ, ರಸ್ತೆ ತುಂಬ ಬೃಹದಾಕಾರದ ಗುಂಡಿಗಳೇ ಆವರಿಸಿ ಮಳೆನೀರು ತುಂಬಿಕೊಂಡ ಕಾರಣದಿಂದ ಚಾಲಕರು ವಾಹನ ಓಡಿಸಲು ಹರಸಾಹಸ ಪಡುವಂತಾಗಿದೆ.
ದೊಡ್ಡ ವಾಹನಗಳು ಉಯ್ಯಾಲೆಯಾಡುತ್ತ ಸಂಚರಿಸುತ್ತಿವೆ. ಕಾರ್, ಬೈಕ್, ರೈತರ ಟ್ರ್ಯಾಕ್ಟರ್, ಚಕ್ಕಡಿಗಳು ಗುಂಡಿಗಳ ಮಧ್ಯೆ ಸಿಲುಕಿಕೊಳ್ಳುತ್ತವೆ. ಅದೆಷ್ಟೋ ವಾಹನಗಳು ಹಾಳಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಉರುಳಿಬಿದ್ದ ಉದಾಹರಣೆಗಳು ಇವೆ. ಕಾರ್ ಮೂಲಕ ಕುಟುಂಬ ಸಮೇತ ಪ್ರಯಾಣ ಬೆಳೆಸುವ ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೇ ಲೋಕೋಪಯೋಗಿ ಇಲಾಖೆ ಸಚಿವರೂ ಆಗಿದ್ದಾರೆ. ಈ ಮಾರ್ಗದಲ್ಲಿ ಆಗಿರುವ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗಮನ ಹರಿಸಬೇಕು ಎಂಬುದು ಜನರ ಆಗ್ರಹ.
ಹೊರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಹಾಳಾಗಿ ಹಲವು ವರ್ಷವಾಗಿದೆ. ತಗ್ಗುಗಳು ಪ್ರಯಾಣಿಕರ ಜೀವ ಹಿಂಡುತ್ತಿವೆ. ಮಳೆಯಿಂದ ರಸ್ತೆ ಕೆರೆಯಂತಾಗಿದೆರಾಜು ಮುತ್ನಾಳ, ಸ್ಥಳೀಯ ನಿವಾಸಿ
ಈಗಾಗಲೇ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಸಂಚಾರಕ್ಕೆ ತೊಂದರೆಯಾಗಬಾರದೆಂದು ಗುಂಡಿಗಳನ್ನು ಮುಚ್ಚಲಾಗುತ್ತಿದೆಸಂಜೀವ ಮಿರಜಕರ್, ಎಇಇ ಲೋಕೋಪಯೋಗಿ ಇಲಾಖೆ ಕಿತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.