ADVERTISEMENT

ಖಾನಾಪುರ ರೈಲು ನಿಲ್ದಾಣ ಹೈಟೆಕ್‌ ಆಗಿಸಲು ಪ್ರಯತ್ನ: ವಿ.ಸೋಮಣ್ಣ ಭರವಸೆ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:12 IST
Last Updated 16 ಸೆಪ್ಟೆಂಬರ್ 2025, 2:12 IST
ಹುಬ್ಬಳ್ಳಿ–ದಾದರ ಎಕ್ಸ್‌ಪ್ರೆಸ್‌ ರೈಲನ್ನು ಖಾನಾಪುರ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಿಸಲು ಸಚಿವ ವಿ.ಸೋಮಣ್ಣ ಚಾಲನೆ ಕೊಟ್ಟರು
ಹುಬ್ಬಳ್ಳಿ–ದಾದರ ಎಕ್ಸ್‌ಪ್ರೆಸ್‌ ರೈಲನ್ನು ಖಾನಾಪುರ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಿಸಲು ಸಚಿವ ವಿ.ಸೋಮಣ್ಣ ಚಾಲನೆ ಕೊಟ್ಟರು   

ಖಾನಾಪುರ: ‘ಖಾನಾಪುರ ರೈಲು ನಿಲ್ದಾಣವನ್ನು 2026ರ ಜೂನ್ ಒಳಗಾಗಿ, ಹೈಟೆಕ್ ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವುದು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಸ್ಥಳೀಯ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಖಾನಾಪುರ ರೈಲು ನಿಲ್ದಾಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ ಒದಗಿಸುವ, ₹11 ಕೋಟಿ ವೆಚ್ಚದಲ್ಲಿ ನಿಲ್ದಾಣದ ಪಕ್ಕದಲ್ಲಿ ಕೆಳಸೇತುವೆ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ನಿಲ್ದಾಣಗಳನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ’ ಎಂದರು.

ADVERTISEMENT

‘ಹುಬ್ಬಳ್ಳಿ-ದಾಂಡೇಲಿ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ತಿಂಗಳು ಈ ಮಾರ್ಗದಲ್ಲಿ ರೈಲು ಸೇವೆ ಆರಂಭಗೊಳ್ಳಲಿದೆ. ಲೋಂಡಾ-ಮೀರಜ್ ಮಾರ್ಗದ 186 ಕಿ.ಮೀ. ವಿದ್ಯುದೀಕರಣ ಕಾರ್ಯವೂ ಮುಗಿದಿದೆ’ ಎಂದು ತಿಳಿಸಿದರು.

‘ವಾಸ್ಕೋ–ನಿಜಾಮುದ್ದೀನ್‌ ಗೋವಾ ಎಕ್ಸ್‌ಪ್ರೆಸ್‌, ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳಿಗೆ ಖಾನಾಪುರ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ವಾಸ್ಕೋ– ಪಂಢರಪುರ ಮಾರ್ಗದಲ್ಲಿ ನಿತ್ಯ ರೈಲು ಸೇವೆ ಆರಂಭಿಸಬೇಕು ಎಂದು ಜನಪ್ರತಿನಿಧಿಗಳು, ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಹಂತ-ಹಂತವಾಗಿ ಬೇಡಿಕೆ ಈಡೇರಿಸಲಾಗುವುದು’ ಎಂದು ಭರವಸೆ ಕೊಟ್ಟರು.

‘ರೈಲು ನಿಲ್ದಾಣಗಳು ಜನಸಾಮಾನ್ಯರ ಜೀವನಾಡಿಗಳಾಗಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ನಿರ್ಲಕ್ಷಿಸಲಾಗಿತ್ತು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಿಲ್ದಾಣಗಳು, ಮಾರ್ಗಗಳು ಮತ್ತು ರೈಲುಗಳನ್ನು ಉನ್ನತೀಕರಿಸಲಾಗಿದೆ. ₹29 ಸಾವಿರ ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆ ವಿವಿಧ ಜನಪರ ಕಾರ್ಯ ಕೈಗೊಂಡಿದೆ’ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಹುಬ್ಬಳ್ಳಿ–ದಾದರ ಎಕ್ಸ್‌ಪ್ರೆಸ್‌ ರೈಲನ್ನು ಖಾನಾಪುರ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಿಸಲು ಸೋಮಣ್ಣ ಚಾಲನೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಶಾಸಕ ವಿಠ್ಠಲ ಹಲಗೇಕರ, ‘ಈ ಭಾಗಕ್ಕೆ ಹೆಚ್ಚಿನ ರೈಲ್ವೆ ಸೇವೆ ಒದಗಿಸಬೇಕು’ ಎಂದು ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಅರವಿಂದ ಪಾಟೀಲ, ಪ್ರಮೋದ ಕೊಚೇರಿ, ಬಸವರಾಜ ಸಾಣಿಕೊಪ್ಪ, ನೈಋತ್ಯ ರೈಲ್ವೆ ಅಧಿಕಾರಿ ಬೇಲಾ ಮೀನಾ, ಅಜಯ ಶರ್ಮಾ ಉಪಸ್ಥಿತರಿದ್ದರು.

₹3 ಕೋಟಿ ವೆಚ್ಚದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ | ಹುಬ್ಬಳ್ಳಿ-ದಾಂಡೇಲಿ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣ | ₹29 ಸಾವಿರ ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆಯಿಂದ ವಿವಿಧ ಜನಪರ ಕಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.