
ಬೆಳಗಾವಿ: ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚು ಮಣ್ಣಿನ ಹಣತೆಗಳನ್ನು ಮಾಡುವುದು ಖಾನಾಪುರ ತಾಲ್ಲೂಕಿನಲ್ಲಿ. ಇಲ್ಲಿ ಹಳದಿ ಮಣ್ಣು (ಕ್ಯಾವಿ) ಹೇರಳವಾಗಿ ಸಿಗುವುದೇ ಇದಕ್ಕೆ ಕಾರಣ.
ಇಲ್ಲಿನ ಮಣ್ಣು ದೇಶದಲ್ಲೇ ಅತ್ಯಂತ ಹೆಚ್ಚು ಜಿಗುಟಿನ ಅಂಶ ಹೊಂದಿದ್ದು ಈ ಉದ್ಯಮಕ್ಕೆ ವರದಾನವಾಗಿದೆ. ಹಳದಿ ಮಣ್ಣಿನ ಜತೆಗೆ ಬಿಳಿ ಹಾಗೂ ಕಪ್ಪು ಮಣ್ಣನ್ನು ಮಿಶ್ರಣ ಮಾಡಿದರೆ ವರ್ಣಮಯ ಕಲಾಕೃತಿಗಳನ್ನು ಸಿದ್ಧಪಡಿಸಬಹುದು.
ಪ್ರತಿ ವರ್ಷ ಗಣೇಶ ಚತುರ್ಥಿ ಹಾಗೂ ದೀಪಾವಳಿ ಬಂದರೆ ಖಾನಾಪುರ ತಾಲ್ಲೂಕಿನ ಕುಂಬಾರಿಕೆ ಕುಟುಂಬಗಳಿಗೆ ವೈಭವದ ದಿನಗಳು ಮರಳುತ್ತವೆ. ಈಗಲೂ 800ಕ್ಕೂ ಹೆಚ್ಚು ಕುಟುಂಬಗಳು ಮಣ್ಣಿನ ಹಣತೆ, ಆಲಂಕಾರಿಕ ಸಾಮಗ್ರಿ ಹಾಗೂ ಮೂರ್ತಿಗಳನ್ನು ಮಾಡಿಯೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿವೆ.
ವಿವಿಧ ಆಕೃತಿಗಳನ್ನು ಹೋಲುವ ಹಣತೆಗಳನ್ನು ತಯಾರಿಸುವುದು ಇಲ್ಲಿನ ಕುಂಬಾರರ ಕೌಶಲಕ್ಕೆ ಸಾಕ್ಷಿ. ನಾಗರ ಹೆಡೆಯ ಹಣತೆ, ಗಣಪನ ಹೊಟ್ಟೆಯ ಹಣತೆ, ಗಂಟೆಯ ಮಾದರಿ, ಕುಲುಮೆ ಮಾದರಿ, ಹೂಜಿ, ನವಿಲು, ಆನೆ ಮೇಲಿನ ಅಂಬಾರಿ ಆಕಾರದ ಹಣತೆಗಳು ಆಕರ್ಷಕವಾಗಿದ್ದು, ದೇಶವ್ಯಾಪಿ ಬೇಡಿಕೆ ಇದೆ.
ಪ್ರತಿ ಕುಟುಂಬದವರೂ ಕನಿಷ್ಠ ಒಂದು ಲಕ್ಷದಿಂದ ನಾಲ್ಕು ಲಕ್ಷಗಳಷ್ಟು ಹಣತೆಗಳನ್ನು ತಯಾರು ಮಾಡುತ್ತಾರೆ. ಅಂದಾಜಿನ ಪ್ರಕಾರ ಪ್ರತಿ ದೀಪಾವಳಿಗೂ 14 ಕೋಟಿಗೂ ಅಧಿಕ ಹಣತೆಗಳು ಸಿದ್ಧವಾಗುತ್ತವೆ.
ಬೊಗಸೆ ಗಾತ್ರದ ಸಾದಾ ಹಣತೆಗೆ ₹2 ದರ. ಅಂಗೈಯಗಲದ ಡಿಸೈನ್ ಹಣತೆಗೆ ₹50ರಿಂದ ₹80ರವರೆಗೂ ದರ ಸಿಗುತ್ತದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ₹16 ಕೋಟಿಗೂ ಅಧಿಕ ಮೊತ್ತದ ಹಣತೆಗಳನ್ನು ಕುಂಬಾರರು ಮಾರಾಟ ಮಾಡಿದ್ದಾರೆ ಎಂದು ಸಂಘಟನೆಯವರು ಅಂದಾಜಿಸಿದ್ದಾರೆ.
ಖಾನಾಪುರದಲ್ಲೇ ಏಕೆ ಹೆಚ್ಚು:
ಮಲಪ್ರಭಾ ನದಿ ಹರವು, ದಟ್ಟವಾದ ಅರಣ್ಯ ಹಾಗೂ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆ; ಈ ಮೂರರ ಕಾರಣ ಇಲ್ಲಿ ಕುಂಬಾರಿಕೆ ಬೇರೂರಿದೆ.
ಖಾನಾಪುರ ತಾಲ್ಲೂಕು ಶೇ 75ರಷ್ಟು ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಇಲ್ಲಿನ ಹದವಾದ ಮಣ್ಣು ಮಳೆಯ ನೀರುನ ಮೂಲಕ ಹರಿದು ಮಲಪ್ರಭಾ ನದಿ ಸೇರುತ್ತದೆ. ಮಲಪ್ರಭೆಯು ಎಲ್ಲೆಂದರಲ್ಲಿ ಕೆರೆ, ಕುಂಟೆಗಳನ್ನು ನಿರ್ಮಿಸಿದ್ದಾಳೆ. ಅದರ ದಡದಲ್ಲಿ ಹೇರಳವಾಗಿ ಹಳದಿ ಜಿಗುಟು ಮಣ್ಣು ಲಭ್ಯವಾಗುತ್ತದೆ. ಹೀಗಾಗಿ, ಅನಾದಿ ಕಾಲದಿಂದಲೂ ಕುಂಬಾರಿಕೆ ಕುಟುಂಬಗಳು ಇಲ್ಲಿ ಹೆಚ್ಚು ನೆೆಲೆಯೂರಿವೆ.
‘ಇಲ್ಲಿ ತಯಾರಾಗುವ ಹಣತೆಗಳು ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು, ಮುಂಬೈ, ಪುಣೆ, ಕೊಲ್ಹಾಪುರ, ಹೈದರಾಬಾದ್, ಚೆನ್ನೈ, ಕೋಲ್ಕತ್ತ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೂ ಸರಬರಾಜು ಆಗುತ್ತವೆ. ಗುಜರಾತ್, ರಾಜಸ್ಥಾನ ಕಡೆಯಿಂದ ವೈವಿಧ್ಯಮ ಬಣ್ಣದ ಹಣತೆಗಳು ಕರ್ನಾಟಕಕ್ಕೆ ಬರುವಂತೆಯೇ ಇಲ್ಲಿನ ಹಣತೆಗಳಿಗೆ ಅಲ್ಲಿ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಕುಂಬಾರಿಕೆ ವೃತ್ತಿ ಮಾಡುವ ಡುಕ್ಕರವಾಡಿಯ ಪುಂಡಲೀಕ ಕುಂಬಾರ.
ತಂದೂರಿ ರೊಟ್ಟಿ, ತಂದೂರಿ ಚಿಕನ್, ತಂದೂರಿ ಪಿಜ್ಜಾ, ತಂದೂರಿ ಚಹಾ ಮುಂತಾದವುಗಳನ್ನು ತಯಾರಿಸುವ ತಂದೂರಿ ಭಟ್ಟಿಗಳನ್ನು ಮಾಡುವಲ್ಲಿ ಇಲ್ಲಿನ ಕುಂಬಾರರು ಸಿದ್ಧಹಸ್ತರು. ಕರ್ನಾಟಕ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೂ ಮಾರಾಟವಾಗುತ್ತಿವೆ.
ನಮ್ಮ ಸಂಸ್ಥೆಯಲ್ಲಿ ಇದೂವರೆ ಸಾವಿರಾರು ಜನರಿಗೆ ಕುಂಬಾರಿಕೆ ಕೌಶಲ ತರಬೇತಿ ನೀಡಿದ್ದೇವೆ. ಕುಂಬಾರೇತರ ಸಮಾಜದವರೂ ಈ ಉದ್ಯೋಗ ಮಾಡುತ್ತಿದ್ದಾರೆಶೇಷೋ ದೇಶಪಾಂಡೆ ಸೂಪರಿಂಟೆಂಡೆಂಟ್ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆ ಖಾನಾಪುರ
ಕುಂಬಾರಿಕೆಯೆಂದರೆ ಮಣ್ಣಿನ ಮಡಕೆ ತಾರಿಸುವುದಷ್ಟೇ ಆಗಿ ಉಳಿದಿಲ್ಲ. ವೈವಿಧ್ಯಮ ಹಣತೆಗಳಿಂದ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದೇನೆಪುಂಡಲೀಕ ಕುಂಬಾರ ಡುಕ್ಕರವಾಡಿ ನಿವಾಸಿ
ದೇಶದ ಏಕಮಾತ್ರ ಕುಂಬಾರಿಕಾ ಸಂಸ್ಥೆ ಖಾನಾಪುರದಲ್ಲಿ ಫಲಪ್ರದ ಮಣ್ಣು ಇರುವುದನ್ನು ಮನಗಂಡು ಕೇಂದ್ರ ಸರ್ಕಾರ 1954ರಲ್ಲಿ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆ ತೆರೆದಿದೆ. ಕುಂಬಾರಿಕೆ ಮೇಲೆ ಸಂಶೋಧನೆ ಮಾಡುವ ಹಾಗೂ ಶೈಕ್ಷಣಿಕ ತರಬೇತಿ ನೀಡುವ ದೇಶದ ಏಕಮಾತ್ರ ಸಂಸ್ಥೆ ಇದು. 5ನೇ ತರಗತಿ ಪಾಸಾದವರಿಂದ ಹಿಡಿದು ಎಂಜಿನಿಯರಿಂಗ್ ಹಾಗೂ ಇತರೇ ಪದವಿ ಪಡೆದವರೂ ಇಲ್ಲಿ ತರಬೇತಿ ಪಡೆಯುತ್ತಾರೆ. ಕುಂಬಾರಿಕೆಯಲ್ಲಿ ಆಧುನಿಕ ಕೌಶಲ ಅಳವಡಿಕೆ ಹಾಗೂ ವೃತ್ತಿ ನೈಪುಣ್ಯತೆಯನ್ನು ಸಾಕಾರಗೊಳಿಸಿದ್ದು ಇದರ ಹಿರಿಮೆ. ಖಾನಾಪುರ ತಾಲ್ಲೂಕಿನ ಕುಂಬಾರರೂ ಈಗ ಸಾಧಾರಣ ಹಣತೆಗಳ ಜತೆಗೆ ಡಿಸೈನ್ ಹಣತೆಗಳು ಆಲಂಕಾರಿಕ ವಸ್ತುಗಳು ಮೂರ್ತಿಗಳು ಚಿನ್ನಾಭರಣ ಹೋಲುವಂಥ ಆಕರ್ಷಕ ಒಡವೆಗಳು... ಹೀಗೆ ತಹರೇವಾರು ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದೆಲ್ಲಕ್ಕೂ ಮೂಲ ಸತ್ವ ನೀಡಿದ್ದು ಕುಂಬಾರಿಕಾ ಸಂಸ್ಥೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.