ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಸತತ ಮಳೆ ಸುರಿದಿದ್ದು, ನಾಗರಗಾಳಿ, ಶಿರೋಲಿ, ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ ಮತ್ತು ಗುಂಜಿ ಅರಣ್ಯ ಪ್ರದೇಶದಲ್ಲಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ಹಳ್ಳ–ಕೊಳ್ಳಗಳ ನೀರಿನ ಹರಿವು ಹೆಚ್ಚಿ ಪ್ರವಾಹದ ಭೀತಿ ನಿರ್ಮಾಣವಾಗಿದೆ.
ಶಿಂಧೊಳ್ಳಿ ಗ್ರಾಮದ ಕೃಷ್ಣಾ ಘಾಡಿ ಅವರ ರೈತರ ಮನೆಯಯ ಗೋಡೆ ಮತ್ತು ಚಾವಣಿ ಬುಧವಾರ ಕುಸಿದ ಪರಿಣಾಮ, ಆಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದೆ. ಎಮ್ಮೆಗೆ ಗರ್ಭಪಾತವಾಗಿದೆ. ಎರಡು ಕರುಗಳನ್ನು ರಕ್ಷಿಸಲಾಗಿದೆ. ಶಾಸಕ ವಿಠ್ಠಲ ಹಲಗೇಕರ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಸ್ ಕೂಡಗಿ, ಶಿಂಧೊಳ್ಳಿ ಪಿಡಿಒ ಪ್ರಭಾಕರ ಭಟ್ ಭೇಟಿ ನೀಡಿ ಪರಿಶೀಲಿಸಿದರು. ಶಾಸಕರ ಸೂಚನೆ ಮೇರೆಗೆ ಪರಿಹಾರ ವಿತರಿಸಲಾಗಿದೆ.
ದೇಗಾಂವ-ಹೆಮ್ಮಡಗಾ, ಪಾಲಿ-ಮೆಂಡಿಲ್, ನೇರಸಾ-ಗವ್ವಾಳಿ, ಅಮಗಾಂವ-ಚಿಕಲೆ, ಸಾತನಾಳಿ-ಮಾಚಾಳಿ-ಮಾಂಜಪಪೈ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಅಸೋಗಾ-ಭೋಸಗಾಳಿ, ಮೋದೆಕೊಪ್ಪ-ಕೌಲಾಪುರವಾಡಾ ಚಿಕಲೆ-ಘೋಸೆ, ಮಳವ-ಅಂಬೋಳಿ-ನೀಲಾವಡೆ, ಖಾನಾಪುರ-ಕುಪ್ಪಟಗಿರಿ, ಕರಂಬಳ-ಜಳಗಾ-ಚಾಪಗಾಂವ, ಕರಂಜಾಳ-ಹಲಸಾಲ, ತೋರಾಳಿ-ಅಮಟೆ ಗ್ರಾಮಗಳ ನಡುವಿನ ಸೇತುವೆಗಳು ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಿಂಧನೂರು-ಹೆಮ್ಮಡಗಾ ಹೆದ್ದಾರಿಯಲ್ಲೂ ವಾಹನ ಸಂಚಾರ ಸ್ಥಗಿತವಾಗಿದೆ.
ಗುರುವಾರದವರೆಗೆ ಕಣಕುಂಬಿಯಲ್ಲಿ 13.3 ಸೆಂ.ಮೀ, ಖಾನಾಪುರ ಪಟ್ಟಣ, ಲೋಂಡಾ, ನಾಗರಗಾಳಿಯಲ್ಲಿ ಸರಾಸರಿ 7 ಸೆಂ.ಮೀ, ಜಾಂಬೋಟಿ, ಗುಂಜಿ, ಅಸೋಗಾಗಳಲ್ಲಿ ಸರಾಸರಿ 9.5 ಸೆಂ.ಮೀ ಮತ್ತು ಉಳಿದೆಡೆ ಸರಾಸರಿ 5 ಸೆಂ.ಮೀ ಮಳೆಯಾಗಿದೆ.
‘ಗುರುವಾರ ಒಟ್ಟು 26 ಮನೆಗಳಿಗೆ ಹಾನಿ ಉಂಟಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.