ADVERTISEMENT

ಸಿಪಿಇಡಿ ಮೈದಾನದಲ್ಲಿ ರೈತರ ಮಹಾಪಂಚಾಯತ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 12:13 IST
Last Updated 20 ಮಾರ್ಚ್ 2021, 12:13 IST
ರಾಕೇಶ್‌ ಟಿಕಾಯತ್‌
ರಾಕೇಶ್‌ ಟಿಕಾಯತ್‌   

ಬೆಳಗಾವಿ: ‘ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್‌ 31ರಂದು ನಗರದ ಸಿಪಿಇಡಿ ಮೈದಾನದಲ್ಲಿ ರೈತರ ಮಹಾಪಂಚಾಯತ್‌ ಆಯೋಜಿಸಲಾಗಿದೆ’ ಎಂದು ರಾಜ್ಯ ರೈತ ಸಂಘದ ಸಮನ್ವಯ ಸಮಿತಿ ಸದಸ್ಯ ಶಿವರಾಯಪ್ಪ ಜೋಗಿನ ತಿಳಿಸಿದರು.

‘ಆರಂಭದಲ್ಲಿ, ನಮಗೆ ಮೈದಾನ ನೀಡಲು ಜಿಲ್ಲಾಡಳಿತ ನಿರಾಕರಿಸಿತ್ತು. ಈ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಶನಿವಾರ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿದ ಬಳಿಕ ಮೈದಾನ ದೊರೆತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ನಾಡಿನಲ್ಲಿರುವ ಎಲ್ಲರೂ ರೈತರೆ. ರೈತನೆ ರಾಷ್ಟ್ರ ನಾಯಕ. ಈಗ ಸೃಷ್ಟಿಯಾಗಿರುವ ಕಾನೂನಿನ ಗೊಂದಲವು ರೈತರಿಗೆ ನಾಯಕತ್ವ ಸಿಗದೆ ಇರುವುದರಿಂದಾಗಿ ಆಗಿದೆ. ನಗರವೂ ಸೇರಿದಂತೆ ಎಲ್ಲ ಕಡೆಯೂ ಜನರನ್ನು ಮನೆ ಮನೆಗೆ ಹೋಗಿ ಮುಟ್ಟುವ ಯೋಜನೆ ಹಮ್ಮಿಕೊಂಡಿದ್ದೇವೆ. ‘ರೈತ ದಾನ’ ಅಥವಾ ‘ರೈತ ಭಿಕ್ಷೆ’ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ, ಒಂದು ಬುಟ್ಟಿ ಅಕ್ಕಿ, ರೊಟ್ಟಿ ಹಾಗೂ ನೋಟನ್ನು ಕೇಳುತ್ತೇವೆ. ಸಂಗ್ರಹವಾಗುವ ಹಣದಿಂದಲೇ ಸಂಘಟನೆ ಬೆಳೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ‘ಮಾರ್ಚ್‌ 25ರಂದು ಬೆಳಿಗ್ಗೆ 11ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ಪೂರ್ವ ಸಿದ್ಧತೆ ಸಭೆ ಆಯೋಜಿಸಿದ್ದೇವೆ. ರೈತ ಮಹಾಪಂಚಾಯತ್‌ ಮೂಲಕ ರೈತ, ದಲಿತ ಹಾಗೂ ಕಾರ್ಮಿಕ ಮಹಾ ಚಳವಳಿಯು ಗಡಿ ನಾಡು ಬೆಳಗಾವಿಯಿಂದ ಪ್ರಾರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.