ಚನ್ನಮ್ಮನ ಕಿತ್ತೂರು: ದಶಕ ಮತ್ತು ಶತಮಾನ ಕಳೆದರೂ ಬಣ್ಣ ಕಾಣದ ಸರ್ಕಾರಿ ಶಾಲೆಗಳು ರಾಜ್ಯದಾದ್ಯಂತ ಅಲ್ಲಲ್ಲಿ ಕಾಣಸಿಗುತ್ತವೆ. ಗಡಿಭಾಗದ ಕನ್ನಡ ಶಾಲೆಗಳ ದುಃಸ್ಥಿತಿಯಂತೂ ಹೇಳತೀರದು.
ಇಂಥ ಶಾಲೆ ಕಟ್ಟಡಗಳ ಅಂದ ಹೆಚ್ಚಿಸಲು ಸಮಾನ ಮನಸ್ಕರ ತಂಡವೊಂದು ‘ಕುಂಚ ನಮ್ಮದು, ಬಣ್ಣ ನಿಮ್ಮದು’ ಎಂಬ ಉಚಿತ ಸೇವೆಯ ಅಭಿಯಾನ ಕೈಗೊಂಡು ಶಾಲಾಭಿಮಾನಿಗಳ ಮೆಚ್ಚುಗೆ ಗಳಿಸಿದೆ.
ಈ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ, ಮಾರ್ಗನಕೊಪ್ಪ, ರಾಯಚೂರು, ವಿಜಯಪುರ ಜಿಲ್ಲೆಗಳ ವಿವಿಧ ಗ್ರಾಮಗಳ ಯುವ ಪೇಂಟರ್‌ಗಳಿದ್ದಾರೆ. ಇವರಲ್ಲಿ ಕನ್ನಡ ಪ್ರೇಮ ಉತ್ಕಟವಾಗಿದ್ದು, ಎಲ್ಲರೂ ತಮ್ಮ ಹೆಸರಿನ ಮುಂದೆ ‘ಕನ್ನಡ, ಕನ್ನಡತಿ’ ಎಂದು ನಾಮಕರಣ ಮಾಡಿಕೊಂಡಿರುವುದು ವಿಶೇಷ.
ತಾಲ್ಲೂಕಿನ ಶಿವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಗೆ ಈಚೆಗೆ ಆಗಮಿಸಿದ್ದ ಈ ತಂಡದ ಭಾಗ್ಯ ಕನ್ನಡತಿ, ಪೂಜಾ ಕನ್ನಡತಿ, ಮಂಜುಳಾ ಕನ್ನಡತಿ ಹಾಗೂ ಸಂತೋಷ ಕನ್ನಡ ಅವರು, ಶಾಲೆಗೆ ಬಣ್ಣ ಬಳಿದು, ಅಂದ ಇಮ್ಮಡಿಗೊಳಿಸಿದ್ದಾರೆ.
ಫೇಸ್‌ಬುಕ್ ಮೂಲಕ ಪ್ರಚಾರ ಕೈಗೊಂಡಿರುವ ಈ ತಂಡದ ಸದಸ್ಯರನ್ನು ಸಂಪರ್ಕಿಸಿದರೆ ಸಾಕು, ಸರ್ಕಾರಿ ಶಾಲೆಗಳಿರುವ ಊರಿಗೇ ಆಗಮಿಸುತ್ತಾರೆ. ಹಿರಿಯ ಪ್ರಾಥಮಿಕ ಶಾಲೆಯಾಗಿದ್ದರೆ ಐದಾರು ಸದಸ್ಯರು ಬರುತ್ತಾರೆ. ಅವರಿಗೆ ಊರಿನವರಾಗಲಿ ಅಥವಾ ಶಾಲೆಯವರಾಗಲಿ ಬಣ್ಣ ಕೊಡಿಸಬೇಕು. ಕೆಲಸ ಮುಗಿಯುವವರೆಗೆ ಆ ಊರಿನಲ್ಲಿದ್ದು ಉಚಿತವಾಗಿ ಬಣ್ಣದ ಸೇವೆ ಕೈಗೊಂಡು ಮರಳುತ್ತಾರೆ.
‘ಸರ್ಕಾರಿ ಶಾಲೆಯ ಕಟ್ಟಡಗಳ ದುಃಸ್ಥಿತಿ ಕಂಡು ಮರುಗಿದ್ದೇವೆ. ಬಣ್ಣ ಹಚ್ಚಲು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಿದೆ. ಹಾಗಾಗಿ ಬಣ್ಣ ಕೊಟ್ಟರೆ ಸಾಕು. ನಾವು ಉಚಿತವಾಗಿ ಸೇವೆ ಮಾಡಿ ನಮ್ಮೂರಿಗೆ ತೆರಳುತ್ತೇವೆ’ ಎಂದು ಪೂಜಾ ಕನ್ನಡತಿ ‘ಪ್ರಜಾವಾಣಿ’ಗೆ ತಿಳಿಸಿದರು. ತಂಡದ ಸಂಪರ್ಕಕ್ಕಾಗಿ ಮೊ.ಸಂ.70267 36726.
ಕನ್ನಡ ಕನ್ನಡಿತಿಯರ ಸತ್ಕಾರ
ಕನ್ನಡ ಭಾಷೆ ಮತ್ತು ಕನ್ನಡ ಶಾಲೆ ಉಳಿವಿಗಾಗಿ ಮೌನ ಕ್ರಾಂತಿ ನಡೆಸಿರುವ ಈ ಕನ್ನಡ ಕನ್ನಡತಿಯರನ್ನು ಕಿತ್ತೂರು ತಾಲ್ಲೂಕಿನ ಶಿವನೂರು ಗ್ರಾಮದಲ್ಲಿ ಈಚೆಗೆ ಸತ್ಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ದಳವಾಯಿ ಮುಖ್ಯಶಿಕ್ಷಕಿ ವಿದ್ಯಾ ಚಂಗೋಲಿ ಪ್ರೊ.ಎನ್.ಜಿ. ಪಾಟೀಲ ಐ.ಜಿ. ಚನ್ನಣ್ಣವರ ಮಹಾಂತೇಶ ಪೂಜೇರ ಶಿವಾನಂದ ಮಾಟೊಳ್ಳಿ ಗ್ರಾಮದ ಶಿವಶಕ್ತಿ ಗ್ರಾಮಾಭಿವೃದ್ಧಿ ತಂಡದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.