ADVERTISEMENT

ಕಿತ್ತೂರು ಉತ್ಸವಕ್ಕೂ ಮುನ್ನ ತೆರೆಯಲಿ ಮುಸುಕು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:15 IST
Last Updated 15 ಅಕ್ಟೋಬರ್ 2025, 4:15 IST
ಬೈಲಹೊಂಗಲದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಅಳವಡಿಸಿರುವ ಕಿತ್ತೂರು ಸಂಸ್ಥಾನದ ಇತಿಹಾಸ ಸಾರುವ ಪ್ರತಿಮೆಗಳಿಗೆ ಮುಸುಕು ಹಾಕಲಾಗಿದೆ
ಬೈಲಹೊಂಗಲದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಅಳವಡಿಸಿರುವ ಕಿತ್ತೂರು ಸಂಸ್ಥಾನದ ಇತಿಹಾಸ ಸಾರುವ ಪ್ರತಿಮೆಗಳಿಗೆ ಮುಸುಕು ಹಾಕಲಾಗಿದೆ   

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಬಲಿದಾನವನ್ನು ಮುಂದಿನ ಪಿಳಿಗೆಗೆ ಪರಿಚಯಿಸುವುದಕ್ಕಾಗಿ ಸುಮಾರು ₹4.5 ಕೋಟಿ ಅನುದಾನದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಹೊಸ ರೂಪ ನೀಡಿದೆ. ಪಟ್ಟಣದ ಐತಿಹಾಸಿಕ ಮಹತ್ವ ಪಡೆದ ಈ ಸ್ಥಳ ಈಗ ಆಕರ್ಷಣೆಯ ಕೇಂದ್ರವಾಗಿದೆ. ಆದರೆ, ಇದೂವರೆಗೂ ಪ್ರತಿಮೆಗಳನ್ನು ಮುಸುಕುಹಾಕಿ ಇಡಲಾಗಿದ್ದು, ಜನರಿಗೆ ಬೇಸರ ಉಂಟು ಮಾಡಿದೆ.

ಕಲ್ಮಠ ಗಲ್ಲಿಯಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಕಳೆದ ಒಂದು ವರ್ಷದಿಂದ ಮೂಲ ಸಮಾಧಿ ಸ್ಥಳ ಹೊರತು ಪಡಿಸಿ ಸುತ್ತಮುತ್ತಲಿನ ವಿನ್ಯಾಸ, ಉದ್ಯಾನ ಮರು ನಿರ್ಮಾಣ ಕಾಮಗಾರಿ ನಡೆದಿದೆ. ಇನ್ನೂ ಸ್ವಲ್ಪ ಮಟ್ಟಿಗೆ ಕೆಲಸ ಬಾಕಿ ಉಳಿದಿದೆ. ಆದರೆ ಆಗಾಗ ಸಮಾಧಿ ಸ್ಥಳದ ಒಳಗೆ ಹೋಗಿ ಬರುವ ಸ್ಥಳೀಯರು ನವೀಕೃತಗೊಂಡ ಸಮಾಧಿ ಸುತ್ತಮುತ್ತಲಿನ ವಿನ್ಯಾಸ, ಉದ್ಯಾನ, ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಸಾರುವ ರೂಪಕಗಳನ್ನು ಕಂಡು ಬೆರಗಾಗುತ್ತಿದ್ದಾರೆ. ನವೀಕೃತಗೊಂಡ ಚನ್ನಮ್ಮನ ಸಮಾಧಿ ಸ್ಥಳ, ರೂಪಕಗಳ ವೀಕ್ಷಣೆಗೆ ಸರ್ಕಾರ, ಅಧಿಕಾರಿಗಳು ಯಾವಾಗ ಅವಕಾಶ ಮಾಡಿ ಕೊಡುತ್ತಾರೆ ಎಂದು ಚಡಪಡಿಸುತ್ತಿದ್ದಾರೆ.

ನವೀಕೃತಗೊಂಡ ಚನ್ನಮ್ಮನ ಸಮಾಧಿ ಸ್ಥಳದ ಸುತ್ತಮುತ್ತಲೂ ಈಗ ಹಸಿರಿನ ಸಿರಿ ತುಂಬಿದೆ. ಪ್ರತಿಮೆಯು ಗ್ಲಾಸ್ ಹೌಸ್‌ನಲ್ಲಿ ಆಕರ್ಷಿಸುತ್ತದೆ. ಚನ್ನಮ್ಮನ ಹುಟ್ಟಿನಿಂದ ತ್ಯಾಗ– ಬಲಿದಾನ, ವೀರ ಮರಣ ಹೊಂದಿದ ಐತಿಹಾಸಿಕ ಚರಿತ್ರೆಯ ಚಿತ್ರಣವನ್ನು ಸಮಾಧಿ ಸ್ಥಳದಲ್ಲಿ ಅಳವಡಿಸಿರುವ ರೂಪಕಗಳ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿದೆ.

ADVERTISEMENT

ಸಮಾಧಿ ಬಲ ಬದಿಯಲ್ಲಿ ಬೈರವ ಕಂಕಣ ಮಲ್ಲಸರ್ಜ 1819ರಲ್ಲಿ ತೀರಿಕೊಂಡ ಕ್ಷಣ, ಮೊದಲ ರಾಣಿ ರುದ್ರಮ್ಮನವರ ಮಗ ಶಿವಲಿಂಗ ರುದ್ರಸರ್ಜನಿಗೆ ಪಟ್ಟ ಕಟ್ಟಿದಾಗ  ಚನ್ನಮ್ಮನವರು ತಮ್ಮ ಮಗ ಶಿವಬಸಪ್ಪನಿಗೆ ‘ಬೈರವ ಕಂಕಣ’ ಕಟ್ಟಿದ ಸಂದರ್ಭ ಮುಂತಾದವರು ಆಕರ್ಷಕವಾಗಿವೆ.

ಎಡ ಬದಿಯಲ್ಲಿ ಚನ್ನಮ್ಮ, ಮಲಸರ್ಜರ ಮದುವೆ ಸನ್ನಿವೇಶ, ಜನನ, ಪ್ರಥಮ ಕಿತ್ತೂರು– ಆಂಗ್ಲೋ ಯುದ್ಧ, ರುದ್ರಮ್ಮನ ದರಬಾರು, ಚನ್ನಮ್ಮನ ಬಂಟ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಸೇನಾನಿಗಳ ಇತಿಹಾಸ ರೂಪಕಗಳು ಒಂದೊಂದು ಸನ್ನಿವೇಶವನ್ನು ಹೇಳುತ್ತವೆ.

ಕಿತ್ತೂರು ಉತ್ಸವ ಒಳಗೆ ಮುಸುಕು ಹಾಕಿದ ರೂಪಕಗಳ ಮುಸುಕು ತೆಗೆದು ಸಮಾಧಿ ಸ್ಥಳ, ರೂಪಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜನರ ಬೇಡಿಕೆಯಂತೆ ಸಮಾಧಿ ಸ್ಥಳ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ.
- ಮಹಾಂತೇಶ ಕೌಜಲಗಿ, ಶಾಸಕ
ಪ್ರವಾಸಿಗರು ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿರುವ ಕಿತ್ತೂರು ಸಂಸ್ಥಾನದ ಇತಿಹಾಸ ಸಾರುವ ರೂಪಕಗಳು ಹಸಿರಿನಿಂದ ಕೂಡಿರುವ ಉದ್ಯಾನ ಕಣ್ತುಂಬಿಕೊಳ್ಳಬಹುದು.
–ಪ್ರವೀನ ಜೈನ, ಉಪವಿಭಾಗಾಧಿಕಾರಿ
ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಆದಷ್ಟು ಬೇಗ ನವೀಕೃತ ಚನ್ನಮ್ಮನ ಸಮಾಧಿ ಸ್ಥಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು.
–ಪ್ರಭಾವತಿ ಫಕೀರಪೂರ, ಆಡಳಿತ ಅಧಿಕಾರಿ, ಕಿತ್ತೂರು ಪ್ರಾಧಿಕಾರ
ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಹೊಸ ರೂಪ ನೀಡಿ ಇತಿಹಾಸ ಸಾರುವ ರೂಪಕಗಳನ್ನು ಅಳವಡಿಸಲಾಗಿದೆ. ಸದುಪಯೋಗ ಮಾಡಿಕೊಳ್ಳಬೇಕು.
–ವೀರೇಶ ಹಸಬಿ, ಮುಖ್ಯಾಧಿಕಾರಿ
ಚನ್ನಮ್ಮನ ಸಮಾಧಿ ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆಸನಗಳು ಶುದ್ಧ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.
–ಮೋಹನ ಪಾಟೀಲ, ಚಿಂತಕ
ಸಮಾಧಿ ಸ್ಥಳದ ಜೋಡಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿರುತ್ತದೆ. ದ್ವಿಚಕ್ರ ವಾಹನ ಕಾರುಗಳ ಪಾರ್ಕಿಂಗ್ ಅಡ್ಡಾದಿಡ್ಡಿ ಮಾಡಲಾಗುತ್ತಿದೆ. ವಿದ್ಯುತ್ ಅವ್ಯವಸ್ಥೆ ಇದೆ.
–ರಾಜು ಕುಡಸೋಮಣ್ಣವರ ಯುವ ಮುಖಂಡ
ಬೈಲಹೊಂಗಲ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಹೊಸ ವಿನ್ಯಾಸದಿಂದ ಕಂಗೊಳಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.