ADVERTISEMENT

ಚನ್ನಮ್ಮನ ಕಿತ್ತೂರು | ಸೊಸೈಟಿ ಆವರಣದಲ್ಲಿ ಗಲಾಟೆ: ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:38 IST
Last Updated 10 ಸೆಪ್ಟೆಂಬರ್ 2025, 2:38 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ಸೊಸೈಟಿ ಆವರಣದಲ್ಲಿ ಪೊಲೀಸರು ಮತ್ತು ಬಿಜೆಪಿ ಬೆಂಬಲಿಗರ ಮಧ್ಯ ಮಾತಿನ ಚಕಮಕಿ ನಡೆಯಿತು
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ಸೊಸೈಟಿ ಆವರಣದಲ್ಲಿ ಪೊಲೀಸರು ಮತ್ತು ಬಿಜೆಪಿ ಬೆಂಬಲಿಗರ ಮಧ್ಯ ಮಾತಿನ ಚಕಮಕಿ ನಡೆಯಿತು   

ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್‌ಗೆ ಮತ ಚಲಾಯಿಸಲು ಮತಹಕ್ಕು (ಡೆಲಿಗೇಶನ್ ಫಾರ್ಮ್) ಪಡೆಯುವ ಸಭೆಯ ದಿನವಾಗಿದ್ದ ಮಂಗಳವಾರ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಗಂಪುಗಳ ಮಧ್ಯ ನೂಕಾಟ, ಗಲಾಟೆ ನಡೆಯಿತು. ಸೊಸೈಟಿ ಆವರಣದಲ್ಲಿ ಸೇರಿದ್ದ ಎರಡೂ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮೊದಲಿದ್ದ ಕಿತ್ತೂರು ಡಿಸಿಸಿ ಬ್ಯಾಂಕ್ ಶಾಖೆಯ ಬ್ಯಾಂಕ್ ನಿರೀಕ್ಷರನ್ನು (ಬಿಐ) ಸೋಮವಾರ ರಾತ್ರಿ ಹಠಾತ್ ಬದಲಾವಣೆ ಮಾಡಿದ ಕ್ರಮದಿಂದಾಗಿ ಸೊಸೈಟಿ ಆವರಣವು ರಣಾಂಗಣದಂತೆ ಸೃಷ್ಟಿಯಾಗಿತ್ತು.

‘ಈಗಾಗಲೇ ಬ್ಯಾಂಕ್ ನಿರೀಕ್ಷಕ ಎಂದು ಆದೇಶ ಪತ್ರ ಹೊರಡಿಸಿದ್ದಾರೆ. ಅವರು ಕರ್ತವ್ಯದಿಂದ ಬಿಡುಗಡೆಯಾಗದ ಹೊರತು ಬೇರೊಬ್ಬರು ನಿರೀಕ್ಷಕ ಬರುವ ಹಾಗಿಲ್ಲ. ಆದರೂ ಶಾಸಕ ಬಾಬಾಸಾಹೇಬ ಪಾಟೀಲ ಬೆಂಬಲಿಗರು ಆ ನಿರೀಕ್ಷಕರನ್ನು ವಾಹನದಲ್ಲಿ ಕರೆತಂದಿದ್ದಾರೆ. ಆಗಮಿಸಿದ ನಿರೀಕ್ಷಕರನ್ನು ಸಭೆಯ ಒಳಗಡೆ ಪೊಲೀಸರೇ ನೂಕಿ ಕಳುಹಿಸಿದ್ದಾರೆ. ಪಕ್ಷಾತೀತವಾಗಿ ನಡೆದುಕೊಳ್ಳಬೇಕಿದ್ದ ಪೊಲೀಸರು ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಅವರನ್ನು ಹೊರಗೆ ಕಳುಹಿಸಬೇಕು. ಈಗ ಅಧಿಕಾರದಲ್ಲಿರುವ ಬಿಐ ಅವರನ್ನು ಒಳಗೆ ಬಿಡಬೇಕು’ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ವಿಕ್ರಮ್ ಇನಾಮದಾರ ಬೆಂಬಲಿಗರು ಆಗ್ರಹಿಸಿದರು.

‘ಈ ವಿಷಯದ ಕುರಿತು ಕೆಲ ಸಮಯದವರೆಗೂ ಪೊಲೀಸರು ಮತ್ತು ಇನಾಮದಾರ ಬೆಂಬಲಿಗರ ಮಧ್ಯ ಮಾತಿನ ಚಕಮಕಿ ನಡೆಯಿತು. ಪಕ್ಷಪಾತವಾಗಿ ಸಿಪಿಐ ಮತ್ತು ಎಸ್ಐ ವರ್ತನೆ ಮಾಡುತ್ತಿದ್ದಾರೆ. ಪೊಲೀಸರ ಈ ವರ್ತನೆ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಡುಗಡೆ ಆಗದಿರುವ ಬಿಐ ಬದಲಾಗಿ ಹಠಾತ್ ಆಗಮಿಸಿರುವ ಬಿಐ ಅವರಿಂದ ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆಯೂ ನೋಡಿಕೊಳ್ಳಲಾಯಿತು.

‘ಸಮವಾದರೆ ಬಿಐ ಪ್ರವೇಶ’

ಮತಹಕ್ಕು ಪತ್ರ ನೀಡುವ ಸಭೆಯಲ್ಲಿ ಎರಡೂ ಕಡೆಗೆ ಸಮ ಮತಗಳು ಚಲಾವಣೆ ಆದರೆ ಬಿಐ ಮಧ್ಯ ಪ್ರವೇಶಿಸಿ ಮತ ಚಲಾಯಿಸುವ ಅಧಿಕಾರ ಇರುತ್ತದೆ. ಈ ಸಾಮಾನ್ಯ ನಿಯಮ ಮೀರಿದ ಬಿಐ ಶಿವಾನಂದ ಕೋಟಗಿ ಅವರೂ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಇದು ಅಕ್ರಮವಾಗಿದೆ’ ಎಂದೂ ಇನಾಮದಾರ ಬೆಂಬಲಿಗರು ಆರೋಪಿಸಿದರು.

‘ಕಾಂಗ್ರೆಸ್ ಬೆಂಬಲಿಗರು ಚಾಕು ಮತ್ತು ಬಡಿಗೆ ತಂದಿದ್ದಾರೆ. ಆ ವ್ಯಕ್ತಿ ಮತ್ತು ವಾಹನವನ್ನು ತೋರಿಸಿದರೂ ಬಂಧಿಸಲಿಲ್ಲ. ಬದಲಾಗಿ ಅವರನ್ನು ಸ್ಥಳದಿಂದ ಪರಾರಿಯಾಗಲು ಬಿಟ್ಟರು’ ಎಂದೂ ಬಿಜೆಪಿ ಕಾರ್ಯಕರ್ತರು ಪೊಲೀಸರು ವಿರುದ್ಧ ಅಪಾದಿಸಿದರು. ಸೊಸೈಟಿ ಆವರಣದಲ್ಲಿ ಪೊಲೀಸರ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.