ADVERTISEMENT

ಕಿತ್ತೂರು ಅಭಿವೃದ್ಧಿಗೆ ಬೆಳಗಾವಿಯಲ್ಲಿ ಚರ್ಚೆ!

ಮಾಧ್ಯಮಕ್ಕೆ ಮಾಹಿತಿ ನೀಡದೆ ಸಭೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 16:04 IST
Last Updated 2 ಜುಲೈ 2021, 16:04 IST

ಬೆಳಗಾವಿ: ಕಿತ್ತೂರು ಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಇಲ್ಲಿನ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಶುಕ್ರವಾರ ಸಭೆ ನಡೆಸಲಾಗಿದೆ.

ಕೆಲವೇ ಕೆಲವರನ್ನು ಸೇರಿಸಿ ಮತ್ತು ಸಭೆ ಬಗ್ಗೆ ಮಾಧ್ಯಮದವರಿಗೂ ಮಾಹಿತಿ ನೀಡದೆ ಚರ್ಚಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್‍ನಲ್ಲಿ ₹50 ಕೋಟಿ ಘೋಷಿಸಿದ್ದಾರೆ. ಇದರಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸಭೆಯ ಕುರಿತು ವ್ಯಾಪಕ ಪ್ರಚಾರ ನೀಡದೆ, ಆಸಕ್ತರನ್ನು ಕತ್ತಲಲ್ಲಿ ಇಡುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿದ್ದಾರೆ.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಕಿತ್ತೂರು ಅರಮನೆ ಮರು ನಿರ್ಮಾಣ ಮಾಡುವ ಪ್ರಯತ್ನಗಳು ಆರಂಭವಾಗಲಿವೆ. ಇದಕ್ಕಾಗಿ ತಜ್ಞರ ಸಮಿತಿ ಒಂದು ರೂಪರೇಷೆ ಸಿದ್ಧಪಡಿಸಲಿದೆ. ನಂತರ ಪ್ರಾಚ್ಯವಸ್ತು ಇಲಾಖೆಯ ಪರವಾನಗಿ ಪಡೆಯಬೇಕಾಗುತ್ತದೆ. ಕಿತ್ತೂರು ಸಂಸ್ಥಾನಕ್ಕೆ ಗುರುಮಠವಾಗಿದ್ದ ಚೌಕಿಮಠದಿಂದ ಕೆಲಸ ಆರಂಭಿಸಲು ಸಲಹೆಗಳು ಬಂದಿವೆ. ಕಿತ್ತೂರನ್ನು ಪ್ರವಾಸಿ ತಾಣವಾಗಿ ಗುರುತಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಶಿಧರ ಬಗಲಿ, ‘ಕಿತ್ತೂರು ಅರಮನೆ ಆವರಣದಲ್ಲಿ 20 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಕಿತ್ತೂರು ಅರಮನೆ ಪುನರ್ ನಿರ್ಮಾಣ ಕಾಮಗಾರಿಯೂ ಇದರಲ್ಲಿ ಸೇರಿದೆ. ಆಕರ್ಷಣೆ ಹೆಚ್ಚಿಸುವ ಉದ್ದೇಶಕ್ಕಿಂತ ಮೊದಲು ಮೂಲ ಸ್ವರೂಪ ಉಳಿಸುವುದಕ್ಕೆ ಆದ್ಯತೆ ನೀಡಬೇಕಿದೆ’ ಎಂದಿದ್ದಾರೆ.

ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಅಮರೇಶ ಯಾತಗಲ್, ಪ್ರೊ.ಎಸ್.ಎಂ. ಗಂಗಾಧರಯ್ಯ, ಕುಲಸಚಿವ ಬಸವರಾಜ ಪದ್ಮಶಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.