ADVERTISEMENT

ಐಟಿ–ಬಿಟಿ ಕಂಪನಿ ಸ್ಥಾಪಿಸದಿದ್ದರೆ ಕಿತ್ತೂರು ಕರ್ನಾಟಕ ಧ್ವಜ ಹಾರಾಟ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:49 IST
Last Updated 12 ನವೆಂಬರ್ 2025, 2:49 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮತ್ತು ಉತ್ತರ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು</p></div>

ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮತ್ತು ಉತ್ತರ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು

   

ಬೆಳಗಾವಿ: ‘ಕಿತ್ತೂರು ಕರ್ನಾಟಕದಲ್ಲಿ ಐಟಿ–ಬಿಟಿ ಕಂಪನಿಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಕಿತ್ತೂರು ಕರ್ನಾಟಕ ಧ್ವಜ ಹಾರಿಸಬೇಕಾಗುತ್ತದೆ’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮತ್ತು ಉತ್ತರ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರು ಎಚ್ಚರಿಕೆ ಕೊಟ್ಟರು.

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಹೋರಾಟಗಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ADVERTISEMENT

‘ರಾಜ್ಯ ಸರ್ಕಾರಕ್ಕೆ ಈ ಭಾಗದ ಬಗ್ಗೆ ಕಾಳಜಿ ಇಲ್ಲ. ಒಂದುವೇಳೆ ಕಾಳಜಿ ಇದ್ದರೆ, ಕಾರ್ಯದರ್ಶಿಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿಕೇಂದ್ರವಾಗಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರ ಬಿ.ಡಿ.ಹಿರೇಮಠ, ‘ಉದ್ಯೋಗ ಅರಸಿ ಈ ಭಾಗದ ಯುವಕರು ಬೆಂಗಳೂರು, ಮುಂಬೈ, ಪುಣೆಗೆ ಹೋಗುತ್ತಾರೆ. ಇದನ್ನು ತಪ್ಪಿಸಿ ಸ್ಥಳೀಯವಾಗಿಯೇ ಉದ್ಯೋಗವಕಾಶ ಕಲ್ಪಿಸುವ ದೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಐಟಿ–ಬಿಟಿ ಕಂಪನಿ ಸ್ಥಾಪಿಸಬೇಕು. ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೂ ಮುನ್ನ, ಸರ್ಕಾರ ಈ ವಿಚಾರವಾಗಿ ನಿರ್ಧಾರ ತಳೆಯಬೇಕು. ಇಲ್ಲದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಕಿತ್ತೂರು ಕರ್ನಾಟಕ ಧ್ವಜ ಹಾರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಅಶೋಕ ಪೂಜಾರಿ, ಭೀಮಪ್ಪ ಗಡಾದ, ಅಡಿವೇಶ ಇಟಗಿ, ನಾಗೇಶ ಗೋಳಶೆಟ್ಟಿ, ಪ್ರೊ.ಎ.ವೈ.ಪಂಗಣ್ಣವರ, ಸಂಜೀವ ಪೂಜಾರಿ, ವಿ.ಜಿ.ನೀರಲಗಿಮಠ, ಚಂದ್ರಶೇಖರ ಸವಡಿ, ಪ್ರವೀಣ ನಾಯ್ಕ, ರಿಯಾಜ್‌ ಪಟಾದ, ಉದಯ ಕರಜಗಿಮಠ, ಸಿ.ಬಿ.ಸಂಗೊಳ್ಳಿ, ಜಿ.ವಿ.ಚರಂತಿಮಠ, ದೀಪಕ ಶಿಗ್ಲಿ, ಸಿ.ಬಿ.ಜೋಳದ, ಆಲಂ ನದಾಫ್, ಕಾಶಿಮಸಾಬ್‌ ಮಕಾನದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.