ಚನ್ನಮ್ಮನ ಕಿತ್ತೂರು: ‘ಕುಲವಳ್ಳಿ ಸೇರಿ ಒಂಬತ್ತು ಹಳ್ಳಿಗಳ ರೈತರನ್ನು ದಶಕಗಳಿಂದ ಕಾಡುತ್ತಿರುವ ಸಾಗುವಳಿ ಹಕ್ಕಿನ ಸಮಸ್ಯೆ ಇತ್ಯರ್ಥಕ್ಕೆ ಬೃಹತ್ ಜನಾಂದೋಲನ ರೂಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದರು.
ಇಲ್ಲಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸೋಮವಾರ ರೈತಸಂಘ ಮತ್ತು ಹಸಿರುಸೇನೆ ಸಂಘಟನೆಯ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಹಾಜರಿದ್ದ ರೈತರ ಉದ್ದೇಶಿಸಿ ಅವರು ಮಾತನಾಡಿದರು.
‘ಸ್ವಾತಂತ್ರ ಬಂದು ಎಪ್ಪತ್ತೆಂಟು ವರ್ಷಗಳು ಗತಿಸುತ್ತಿವೆ. ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ವಿರುದ್ಧ ದೇಶದ್ರೋಹಿ ಕೆಲಸ ಮಾಡಿರುವ ವ್ಯಕ್ತಿಗಳ ಪರವಾಗಿ ಇನ್ನೂ ಜನಪ್ರತಿನಿಧಿಗಳು ಇರುವುದು ದುರಂತ’ ಎಂದರು.
‘ಕುಲವಳ್ಳಿ ಪ್ರದೇಶದಲ್ಲಿ ಇರುವ ಭೂಮಿ ಯಾವೊಂದು ವ್ಯಕ್ತಿಯದ್ದಲ್ಲ. ಅದು ರೈತರ ಭೂಮಿಯಾಗಿದೆ. ನ್ಯಾಯಯುತವಾಗಿ ಅವರಿಗೆ ಸಾಗುವಳಿ ಹಕ್ಕು ಸಿಗಬೇಕಾಗಿದೆ. ಭೂಮಿ ದಕ್ಕಿಸಿಕೊಳ್ಳುವವರೆಗೆ ಹೋರಾಟ ಮಾಡಲಾಗುವುದು’ ಎಂದು ಘೋಷಿಸಿದರು.
ಮುಖಂಡ ಪ್ರಕಾಶ ನಾಯ್ಕ ಮಾತನಾಡಿ, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹಿಡಿದುಕೊಟ್ಟ ದೇಶದ್ರೋಹದ ಕೆಲಸಕ್ಕೆ ಘಾತ್ಕಿ ಇನಾಂ ಎಂದು ಬ್ರಿಟಿಷ್ ಸರ್ಕಾರ ನೀಡಿದ ಭೂಮಿ ಇದಾಗಿದೆ. ಸ್ವಾತಂತ್ರ್ಯ ಬಂದ ನಂತರ ಇನಾಂ ಭೂಮಿ ರದ್ದತಿ ಕಾಯ್ದೆ ಜಾರಿಗೆ ತರಲಾಗಿದೆ. ಇದನ್ನು ಲೆಕ್ಕಿಸದೇ ರಾಜ್ಯಾಂಗ ಮತ್ತು ಕಾರ್ಯಾಂಗ ರೈತರ ವಿರುದ್ಧವಾಗಿ ಇಲ್ಲಿಯವರೆಗೂ ನಡೆದು ಕೊಳ್ಳುತ್ತಿರುವುದು ಖಂಡನೀಯ’ ಎಂದರು.
ರಾಜ್ಯರೈತ ಸಂಘ, ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಬಿಷ್ಟಪ್ಪ ಶಿಂದೆ, ಅಧ್ಯಕ್ಷ ರಾಜಶೇಖರ ಅಂಗಡಿ, ಉಪಾಧ್ಯಕ್ಷ ಅರ್ಜುನ ಮಡಿವಾಳರ, ಸಂಚಾಲಕ ಸಹದೇವ ಪಟ್ಟನಾಯ್ಕರ್, ಕಾರ್ಯದರ್ಶಿ ಮಹಾಂತೇಶ ಎಮ್ಮಿ, ಸಹಕಾರ್ಯದರ್ಶಿ ಮಡಿವಾಳಪ್ಪ ದೊಡವಾಡ, ಪದಾಧಿಕಾರಿ ಅಮೀರ್ ಅಮ್ಜಾ ಗಡಾದ, ರೈತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.