ADVERTISEMENT

ಕಿತ್ತೂರು ಉತ್ಸವ ಸ್ಮರಣ ಸಂಚಿಕೆ ‘ಗಜಪ್ರಸವ’

ವರ್ಷ ಕಳೆದರೂ ಓದುಗರಿಗೆ ನಿಲುಕದ ಸಂಚಿಕೆ, ಕೈಗೂಡದ ಸಾಹಿತಿ– ಇತಿಹಾಸಪ್ರಿಯರ ಕನಸು

ಪ್ರದೀಪ ಮೇಲಿನಮನಿ
Published 12 ಅಕ್ಟೋಬರ್ 2025, 5:46 IST
Last Updated 12 ಅಕ್ಟೋಬರ್ 2025, 5:46 IST
ದ್ವಿಶತಮಾನೋತ್ಸವ ಸ್ಮರಣ ಸಂಚಿಕೆಯ ಮುಖಪುಟ
ದ್ವಿಶತಮಾನೋತ್ಸವ ಸ್ಮರಣ ಸಂಚಿಕೆಯ ಮುಖಪುಟ   

ಚನ್ನಮ್ಮನ ಕಿತ್ತೂರು: 200ನೇ ರಾಣಿ ಚನ್ನಮ್ಮನ ವಿಜಯೋತ್ಸವದ ಅಂಗವಾಗಿ ಕಿತ್ತೂರು ಉತ್ಸವ ಆಚರಣೆ ಸಮಿತಿ ಹೊರತರಲು ಉದ್ದೇಶಿಸಿದ್ದ ಸ್ಮರಣ ಸಂಚಿಕೆಗೆ ‘ಗಜಪ್ರಸವ’ ಎನ್ನುವಂತಾಗಿದೆ. ಮತ್ತೊಂದು ಉತ್ಸವ ಸಮೀಪಿಸಿದ್ದರೂ ಹಳೆಯ ಸಂಚಿಕೆ ಬಿಡುಗಡೆ ಆಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

1824ರ ಅಕ್ಟೋಬರ್ 23ರಂದು ಬ್ರಿಟಿಷರ ವಿರುದ್ಧ ನಡೆದ ಕಿತ್ತೂರು ಯುದ್ಧದಲ್ಲಿ ರಾಣಿ ಚನ್ನಮ್ಮನ ಸೈನಿಕರು ಅಧಿಕಾರಿ ಥ್ಯಾಕರೆಯನ್ನು ಹತ್ಯೆ ಮಾಡಿ ವಿಜಯ ಸಾಧಿಸಿದ್ದರು. ಇದನ್ನು ನೆಪವಾಗಿಟ್ಟುಕೊಂಡು ರಾಣಿ ಚನ್ನಮ್ಮ ಹಾಗೂ ಸಂಸ್ಥಾನದ ವೀರರ ಶೌರ್ಯ, ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಣೆಗಾಗಿ ರಾಜ್ಯ ಸರ್ಕಾರ 1997ರಿಂದ ನಿರಂತರವಾಗಿ ಕಿತ್ತೂರು ಉತ್ಸವ ಆಚರಿಸಿಕೊಂಡು ಬರುತ್ತಿದೆ. (ಬಂಗಾರಪ್ಪ ನೇತೃತ್ವದ ಸರ್ಕಾರವೂ ಈ ಮೊದಲು ಉತ್ಸವ ಆಚರಿಸಿತ್ತು ಎಂಬುದನ್ನು ಇಲ್ಲಿಯ ಹಿರಿಯರು ನೆನಪಿಸುತ್ತಾರೆ).

ಕಳೆದ ವರ್ಷ 200 ವರ್ಷಗಳನ್ನು ವಿಜಯೋತ್ಸವ ಪೂರೈಸಿತ್ತು. ದ್ವಿಶತಮಾನದ ಮಹತ್ವದ ಕಾಲಘಟ್ಟದ ಉತ್ಸವ ಆಚರಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅವರ ಪ್ರಯತ್ನದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹5 ಕೋಟಿ ಬಿಡುಗಡೆ ಮಾಡಿದ್ದರು.

ADVERTISEMENT

ರಾಣಿ ಚನ್ನಮ್ಮನ ಜನ್ಮಭೂಮಿ ಕಾಕತಿ, ಕರ್ಮಭೂಮಿ ಕಿತ್ತೂರು, ಸಮಾಧಿ ಸ್ಥಳ ಬೈಲಹೊಂಗಲ ಮತ್ತು ಜಿಲ್ಲೆಯ ಕೇಂದ್ರ ಸ್ಥಾನ ಬೆಳಗಾವಿಯಲ್ಲೂ ಈ ದುಡ್ಡಿನಲ್ಲಿ ಉತ್ಸವ ಆಚರಣೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗಿತ್ತು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಹಿರಿಯ ವಿದ್ವಾಂಸರು, ಸಾಹಿತಿಗಳು ಮತ್ತು ಬರಹಗಾರರಿಂದ ಸ್ಮರಣ ಸಂಚಿಕೆ ಹೊರತರುವ ನಿರ್ಧಾರ ಮಾಡಲಾಗಿತ್ತು. ಅದಕ್ಕಾಗಿ ಸ್ಮರಣ ಸಂಚಿಕೆ ಸಮಿತಿ ಮತ್ತು ಸಂಪಾದಕ ಮಂಡಳಿಯನ್ನೂ ನೇಮಿಸಲಾಗಿತ್ತು.

ಈ ಮಂಡಳಿಯೂ ಹಲವಾರು ಲೇಖನಗಳನ್ನು ಸ್ಮರಣ ಸಂಚಿಕೆಗೆ ಕಲೆ ಹಾಕಿತ್ತು. ಅಂದು ವೇದಿಕೆ ಮೇಲೆ ಮುಖಪುಟ ಪ್ರದರ್ಶಿಸಿ ಪುಸ್ತಕ ಬಿಡುಗಡೆಯೂ ಆಯಿತೆಂದು ಘೋಷಿಸಲಾಗಿತ್ತು. ಅಚ್ಚರಿಯೆಂದರೆ ಹಿರಿಯ ಸಾಹಿತಿಗಳ ಲೇಖನಗಳ ಆ ಸ್ಮರಣ ಸಂಚಿಕೆ ಇನ್ನೂ ಹೊರಬಂದಿಲ್ಲ. 201ರ ಉತ್ಸವದ ಸ್ಮರಣೆಯಲ್ಲಾದರೂ ಸಂಚಿಕೆ ಹೊರಬರಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

200 ನೇ ವಿಜಯೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಹೊರತರಲು ಉತ್ಸವ ಆಚರಣೆ ಸಮಿತಿ ನಿರ್ಧರಿಸಿತ್ತು. ಅನುದಾನದ ಕೊರತೆಯಿಂದ ಅದು ನನೆಗುದಿಗೆ ಬಿದ್ದಿದೆ
ಯ.ರು. ಪಾಟೀಲ ಸ್ಮರಣ ಸಂಚಿಕೆಯ ಸಂಪಾದಕ
ಸ್ಮರಣ ಸಂಚಿಕೆಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಇನ್ನೂ ಬಿಡುಗಡೆ ಮಾಡಿಲ್ಲ
ಎನ್‌.ಶ್ರೀಕಂಠ ಅಧ್ಯಕ್ಷ 200ನೇ ಕಿತ್ತೂರು ಉತ್ಸವ ಸ್ಮರಣ ಸಂಚಿಕೆ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.