ADVERTISEMENT

ಕಿತ್ತೂರು ಉತ್ಸವ: ಮಳೆಗೆ ಕೊಚ್ಚಿಕೊಂಡು ಹೋದ ಕ್ರೀಡಾಸಕ್ತಿ

ಧಾರಾಕಾರವಾಗಿ ಸುರಿದ ವರುಣದೇವ, ಶಾಮಿಯಾನದ ಆವರಣ ಕೆಸರುಮಯ, ಪ್ರೇಕ್ಷಕರಿಗೆ ಸಿಗದ ನೆಮ್ಮದಿ

ಪ್ರದೀಪ ಮೇಲಿನಮನಿ
Published 25 ಅಕ್ಟೋಬರ್ 2025, 4:38 IST
Last Updated 25 ಅಕ್ಟೋಬರ್ 2025, 4:38 IST
ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ಮಳೆಯಿಂದಾಗಿ ಕೆಸರುಮಯವಾದ ವಸ್ತು ಪ್ರದರ್ಶನ ಮಳಿಗೆಯಲ್ಲೇ ಜನ ಓಡಾಡಿದರು  ಪ್ರಜಾವಾಣಿ ಚಿತ್ರ 
ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ಮಳೆಯಿಂದಾಗಿ ಕೆಸರುಮಯವಾದ ವಸ್ತು ಪ್ರದರ್ಶನ ಮಳಿಗೆಯಲ್ಲೇ ಜನ ಓಡಾಡಿದರು  ಪ್ರಜಾವಾಣಿ ಚಿತ್ರ    

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಶುಕ್ರವಾರ ನಡೆಯಬೇಕಿದ್ದ ವಿವಿಧ ಕ್ರೀಡೆಗಳನ್ನು ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ರದ್ದು ಪಡಿಸಲಾಯಿತು. ಆಟ ನಡೆಯಬೇಕಿದ್ದ ಮೈದಾನವೂ ಮಳೆಯಿಂದಾಗಿ ರಾಡಿಯಾಗಿತ್ತು. ಆಡುವ ಹುಮ್ಮಸ್ಸಿನಲ್ಲಿ ಬಂದಿದ್ದ ಕ್ರೀಡಾಪಟುಗಳು, ನೋಡುವ ಉಮೇದಿನಲ್ಲಿದ್ದ ಕ್ರೀಡಾಭಿಮಾನಿಗಳೆಲ್ಲರ ಬಯಕೆ ನೀರಲ್ಲಿ ಕೊಚ್ಚಿಕೊಂಡು ಹೋಯಿತು.

ಬಿಸಿಲಿನ ವಾತಾವರಣ ಇದ್ದರೆ ಪ್ರತಿ ವರ್ಷದಂತೆ ಈ ವರ್ಷವೂ ವೀಕ್ಷಕರ ಮನರಂಜಿಸುವ ಕ್ರೀಡೆಗಳು ನಡೆಯಲಿದ್ದವು. ‘ಕಬಡ್ಡಿ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟದ ಪಂದ್ಯಾವಳಿ ಏರ್ಪಡಿಸಲಾಗಿತ್ತು. ವಿಪರೀತ ಸುರಿದ ಮಳೆಯಿಂದಾಗಿ ಎಲ್ಲ ಪಂದ್ಯಗಳನ್ನು ರದ್ದುಗೊಳಿಸಲಾಯಿತು’ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ ಮೂಲಗಳು ತಿಳಿಸಿವೆ.

ಶನಿವಾರ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪಂದ್ಯವೂ ನಡೆಯುವ ಅನುಮಾನವಿದೆ. ಮಳೆಯಿಂದಾಗಿ ಕುಸ್ತಿ ಕಣ ಶುಕ್ರವಾರ ಸಂಜೆಯವರೆಗೂ ಸಿದ್ದವಾಗಿರಲಿಲ್ಲ. ಆಗಾಗ್ಗೆ ಮಳೆ, ಮೋಡ ಕವಿದ ವಾತಾವರಣ ಮುಂದುವರೆದಿತ್ತು.

ADVERTISEMENT

ಇತ್ತ ವಾಣಿಜ್ಯ ಮಳಿಗೆಗಳು, ಜಾತ್ರ ಮೈದಾನ, ಮಕ್ಕಳ ಮೋಜಿನ ಆಟದ ಮೈದಾನ, ಫಲ – ಪುಷ್ಪ ಪ್ರದರ್ಶನ ಹಾಗೂ ಕೃಷಿ ವಸ್ತು ಪ್ರದರ್ಶನ ಆವರಣದಲ್ಲಿಯೂ ಮೈದಾನವೆಲ್ಲ ಕೆಸರು ಗದ್ದೆಯಂತಾಯಿತು. ಆಕರ್ಷಣೆಗೆ ಇತ್ತ ಬಂದ ಜನ ಬಟ್ಟೆಗಳನ್ನು ಕೆಸರು ಮಾಡಿಕೊಂಡೇ ಹೋದರು.

ಇನ್ನೊಂದೆಡೆ, ಮುಖ್ಯ ವೇದಿಕೆಯ ಶಾಮಿಯಾನದ ಕೆಳಗೂ ಅಪಾರ ನೀರು ಹರಿದು ಬಂದಿದ್ದರಿಂದ ಇಡೀ ಆವರಣ ಕೆಸರಿನಿಂದ ತುಂಬಿತು. ಇದರಿಂದ ವೀಕ್ಷಕರು, ಸಾಹಿತ್ಯಾಸಕ್ತರು, ಇತಿಹಾಸದ ಅಭಿಮಾನಿಗಳು ಇತ್ತ ಸುಳಿಯಲೇ ಇಲ್ಲ.

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ಶುಕ್ರವಾರವೂ ರಸ್ತೆಗಳಲ್ಲಿ ಮಳೆ ನೀರು ಕಟ್ಟಿಕೊಂಡಿತು  ಪ್ರಜಾವಾಣಿ ಚಿತ್ರ

ಸಿದ್ಧತೆ ಮಾಡಿಕೊಳ್ಳದ ಜಿಲ್ಲಾಡಳಿತ

ಧಾರಾಕಾರ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ವಾರದ ಮುಂಚೆಯೇ ಮುನ್ಸೂಚನೆ ನೀಡಿದ್ದರೂ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಇದರಿಂದ ಇಡೀ ಉತ್ಸವಕ್ಕೆ ಮಳೆಯಿಂದ ಸಾಕಷ್ಟು ಅಡ್ಡಿಯಾಯಿತು. ‘ಪ್ರತಿ ಬಾರಿಯೂ ಕಿತ್ತೂರು ಉತ್ಸವ ಮಳೆಯಲ್ಲೇ ನಡೆಯುತ್ತದೆ. ಇದು ನಮಗೆ ಹೊಸದೇನಲ್ಲ. ನಮ್ಮ ಉತ್ಸಾಹವೂ ಕುಂದುವುದಿಲ್ಲ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಮೊದಲ ದಿನವೇ ಸಾಕಷ್ಟು ಅಡೆತಡೆ ಉಂಟಾಗಿತ್ತು. ಆದರೂ ಎರಡನೇ ದಿನ ಅದನ್ನು ಸರಿ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. 

ಕೋಟೆ ಆವರಣದಲ್ಲೇ ಶೌಚ: ಅಡುಗೆ ಮಾಡುವ ಪೆಂಡಾಲ್‌ ಮಾಧ್ಯಮ ಕೇಂದ್ರ ತಾತ್ಕಾಲಿಕ ಶೌಚಾಲಯದತ್ತ ಹೆಜ್ಜೆ ಇಟ್ಟರೂ ಜಾರಿ ಬೀಳುವಂಥ ಸ್ಥಿತಿ ನಿರ್ಮಾಣವಾಯಿತು. ಶೌಚಾಲಯದಲ್ಲಿ ನೀರೂ ಇಲ್ಲದ ಕಾರಣ ಜನರು ಕೋಟೆ ಆವರಣದಲ್ಲೇ ಶೌಚಕ್ಕೆ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.