ADVERTISEMENT

‘ಮಹಿಳಾ ಸಬಲೀಕರಣಕ್ಕೆ ಹಲವು ಚಟುವಟಿಕೆ’

ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಉಪಾಧ್ಯಕ್ಷೆ ಸುಜಾತಾ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 14:33 IST
Last Updated 6 ಮಾರ್ಚ್ 2021, 14:33 IST
ಬೆಳಗಾವಿಯ ಕೆಎಲ್‌ಇ ಸ್ವಶಕ್ತಿ ಸಬಲೀಕರಣ ಮಹಿಳಾ ಘಟಕದಿಂದ ಆರಂಭಿಸಿರುವ ‘ಹೋಂ ಕೇರ್’ ಉಪಕರಣಗಳ ಘಟಕ
ಬೆಳಗಾವಿಯ ಕೆಎಲ್‌ಇ ಸ್ವಶಕ್ತಿ ಸಬಲೀಕರಣ ಮಹಿಳಾ ಘಟಕದಿಂದ ಆರಂಭಿಸಿರುವ ‘ಹೋಂ ಕೇರ್’ ಉಪಕರಣಗಳ ಘಟಕ   

ಬೆಳಗಾವಿ: ‘ಇಲ್ಲಿ 2007ರಿಂದ ಕಾರ್ಯನಿರ್ವಹಿಸುತ್ತಿರುವ ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಲ್ಲಿ ಈವರೆಗೆ 1,400 ಮಂದಿ ಸದಸ್ಯತ್ವ ಪಡೆದಿದ್ದಾರೆ. ಸಂಸ್ಥೆಗೆ ಮಾತ್ರವೇ ಸೀಮಿತವಾಗದೆ, ಜಿಲ್ಲೆಯಾದ್ಯಂತ ಮಹಿಳೆಯರ ಅನುಕೂಲಕ್ಕಾಗಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಉಪಾಧ್ಯಕ್ಷೆ ಡಾ.ಸುಜಾತಾ ಜಾಲಿ ಹೇಳಿದರು.

‘ಹಿಂದುಳಿದ ಹಾಗೂ ವಂಚಿತ ಮಹಿಳೆಯರನ್ನು ಮುಖ್ಯವಾಗಿಸಿಕೊಂಡು ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಲೈಂಗಿಕ ಕಾರ್ಯಕರ್ತೆಯರು ಹಾಗೂ ಕಾರಾಹೃಹದ ಕೈದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ. ಆಪ್ತಸಮಾಲೋಚನೆ ನಡೆಸಿ, ಅಗತ್ಯ ಇದ್ದವರಿಗೆ ಚಿಕಿತ್ಸೆ ನೀಡಲಾಗಿದೆ. 4ಸಾವಿರ ಮಂದಿ ಪ್ರಯೋಜನ ಪಡೆದಿದ್ದಾರೆ. ಔಷಧಿಗಳನ್ನು ಉಚಿತವಾಗಿ ವಿತರಿಸಲಾಗಿದೆ’.

ADVERTISEMENT

ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ:

‘ಸ್ತನ ಕ್ಯಾನರ್‌ ತ‍‍‍ಪಾಸಣಾ ಶಿಬಿರಗಳಲ್ಲಿ 2ಸಾವಿರ ಮಂದಿ ಪಾಲ್ಗೊಂಡಿದ್ದರು. ಅದರಲ್ಲಿ 21 ಮಹಿಳೆಯರಿಗೆ ಸಂಪೂರ್ಣ ಚಿಕಿತ್ಸೆ ಒದಗಿಸಲಾಗಿದೆ. ಶಿಬಿರದ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಉತ್ತರ ಕರ್ನಾಟಕ ಪ್ರದೇಶದಲ್ಲಿ 2020–21ರಲ್ಲಿ ಸ್ತನ ಕ್ಯಾನ್ಸರ್ ಹರಡುವಿಕೆ ಅಧ್ಯಯನಕ್ಕೆ ಸಂಶೋಧನಾ ಯೋಜನೆ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಸ್ವಚ್ಛ ಭಾರತ ಅಭಿಯಾನ ಅನುಷ್ಠಾನಕ್ಕೆ ಕೈಜೋಡಿಸಿದ್ದೇವೆ. ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಫಲಶ್ರುತಿ ಎನ್ನುವಂತೆ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯು ಅಭಿಯಾನದಲ್ಲಿ ಅತ್ಯುನ್ನತ ಶ್ರೇಯಾಂಕ ಪಡೆಯಲು ಸಾಧ್ಯವಾಯಿತು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.

‘ಕೆಲಸದ ಸ್ಥಳದಲ್ಲಿ ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ. ಮಹಿಳೆಯರ ಸ್ಥಾನಮಾನ ಎತ್ತಿ ಹಿಡಿಯಲು ಘಟಕ ಒತ್ತು ಕೊಟ್ಟಿದೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಹದಿಹರೆಯದವರಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಹೋಂ ಕೇರ್:

‘ಕೋವಿಡ್–19 ಹೆಚ್ಚಿದ್ದ ಸಂದರ್ಭದಲ್ಲಿ ರೋಗಿಗಳಿಗೆ ‘ಹೋಂ ಕೇರ್’ ಉಪಕರಣಗಳ ಘಟಕ ಆರಂಭಿಸಲಾಗಿದೆ. ಕಡಿಮೆ ಹಣ ಠೇವಣಿ ಪಡೆದು ಮಹಿಳಾ ರೋಗಿಗಳಿಗೆ ಹಾಸಿಗೆ, ಏರ್‌ಬೆಡ್, ಸಲೈನ್ ಸ್ಟ್ಯಾಂಡ್, ವಾಕರ್, ಗಾಲಿ ಕುರ್ಚಿ ನೀಡಲಾಗುತ್ತಿದೆ. ಈವರೆಗೆ 25 ಮಂದಿ ಲಾಭ ಪಡೆದಿದ್ದಾರೆ. ಠೇವಣಿ ಹಣ ವಾಪಸ್ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷೆ ಆಶಾ ತಾಯಿ ಕೋರೆ, ಉಪಾಧ್ಯಕ್ಷೆ ಡಾ.ಅಲ್ಕಾ ಕಾಳೆ, ಮುಖ್ಯ ಸಂಯೋಜಕಿ ಡಾ.ಪ್ರೀತಿ ದೊಡ್ಡವಾಡ, ಕಾರ್ಯದರ್ಶಿ ಡಾ.ನೇಹಾ ದಡೇದ ಇದ್ದರು.

***

ಸಬಲೀಕರಣದತ್ತ ಹೆಜ್ಜೆ...

* ‘ವೀ ಕೇರ್‌’ನ ಎರಡು ಶಾಖೆ ಆರಂಭಿಸಿ, ಆರು ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ದುಡಿಯುವ ನೂರು ಮಹಿಳೆಯರ ಮಕ್ಕಳ ಆರೈಕೆ ಮಾಡಲಾಗುತ್ತಿದೆ.

* ಹಣಕಾಸು ಮತ್ತು ಹೂಡಿಕೆ ಯೋಜನೆ, ಕಂಪ್ಯೂಟರ್‌ ತರಬೇತಿ, 2ಸಾವಿರ ಮಂದಿಗೆ ಕೌಶಲ ಅಭಿವೃದ್ಧಿ ತರಬೇತಿ ಕೊಡಲಾಗಿದೆ.

* ‘ಗೇಮ್ ಆಫ್‌ ಗಿವಿಂಗ್’ ಕಾರ್ಯಕ್ರಮದ ಮೂಲಕ ದಾನಿಗಳು ಹಾಗೂ ಎನ್‌ಜಿಒಗಳ ನಡುವೆ ಸಂಪರ್ಕ ಕಲ್ಪಿಸಲಾಗುತ್ತಿದೆ.

* ನಾನಾವಾಡಿಯ ಮರಾಠಿ ಸರ್ಕಾರಿ ಪ್ರಾಥಮಿಕ ಶಾಲೆಗೆ 2 ಶೌಚಾಲಯ ಕಟ್ಟಿಸಿಕೊಡಲಾಗಿದೆ.

* ‘ಮೇಕ್‌ ಇನ್‌ ಬೆಳಗಾವಿ’ ಉತ್ತೇಜಿಸಲು ‘ವೋಕಲ್ ಫಾರ್ ಲೋಕಲ್‌’ ಕರೆಯಂತೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಒದಗಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.