ADVERTISEMENT

ಮಿಶ್ರ ಬೇಸಾಯದಿಂದ ಲಾಭ: ಕೊಡಚವಾಡ ಗ್ರಾಮದ ರೈತ ವಿಮಲನಾಥ ಸಾಧನೆ

ಪ್ರಸನ್ನ ಕುಲಕರ್ಣಿ
Published 28 ಏಪ್ರಿಲ್ 2022, 7:23 IST
Last Updated 28 ಏಪ್ರಿಲ್ 2022, 7:23 IST
ಖಾನಾಪುರ ತಾಲ್ಲೂಕು ಕೊಡಚವಾಡ ಗ್ರಾಮದ ವಿಮಲನಾಥ ಹಾರುಗೊಪ್ಪ ಅವರು ಬೆಳೆದಿರುವ ಸಪೋಟ ಮರ
ಖಾನಾಪುರ ತಾಲ್ಲೂಕು ಕೊಡಚವಾಡ ಗ್ರಾಮದ ವಿಮಲನಾಥ ಹಾರುಗೊಪ್ಪ ಅವರು ಬೆಳೆದಿರುವ ಸಪೋಟ ಮರ   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೊಡಚವಾಡ ಗ್ರಾಮದ ರೈತ ವಿಮಲನಾಥ ಗೋಪಾಲ ಹಾರುಗೊಪ್ಪ ಅವರು ತಮ್ಮ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಶಿಸ್ತುಬದ್ಧವಾಗಿ ಕೈಗೊಂಡು ನಿಯಮಿತ ಲಾಭ ಗಳಿಸುತ್ತಿದ್ದಾರೆ.

ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಿ ಕೃಷಿ ಮತ್ತು ತೋಟಗಾರಿಕೆ ಕೈಗೊಳ್ಳುತ್ತಿದ್ದಾರೆ. ಜವಾರಿ, ದೇಸಿ ತಳಿಯ ಭತ್ತ, ರಾಗಿ, ವಿವಿಧ ರೀತಿಯ ಕಾಳುಗಳು, ತರಕಾರಿ, ಹಣ್ಣುಗಳನ್ನು ಋತುಮಾನಕ್ಕೆ ತಕ್ಕಂತೆ ಬೆಳೆದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಹೊರಹೊಮ್ಮಿದ್ದಾರೆ.

ತಮ್ಮ 3 ಎಕರೆ ತೋಟದ ಪೈಕಿ 2 ಎಕರೆಯಲ್ಲಿ ‘ಟೆನ್ನಿಸ್ ಬಾಲ್’ ತಳಿಯ ಸಪೋಟ (ಚಿಕ್ಕು), ಅರ್ಧ ಎಕರೆಯಲ್ಲಿ ಮಾವು, 10 ಗುಂಟೆಯಲ್ಲಿ ಗೋಡಂಬಿ ಸಸಿಗಳನ್ನು ಬೆಳೆಸಿದ್ದಾರೆ. ಅವುಗಳ ಸಂರಕ್ಷಣೆಗಾಗಿ ಜಮೀನಿನ ಸುತ್ತಲೂ ತೇಗದ ಮರಗಳನ್ನು ಬೆಳೆಸುತ್ತಿದ್ದಾರೆ. 80 ಸಪೋಟ, 30 ಮಾವಿನ ಮತ್ತು 15 ಗೋಡಂಬಿ ಸೇರಿದಂತೆ ಒಟ್ಟು 130ಕ್ಕೂ ಹೆಚ್ಚು ಮರಗಳಿಗೆ ನಿಯಮಿತವಾಗಿ ಜೀವಾಮೃತ ಮತ್ತು ಗೋಕೃಪಾಮೃತ, ಸೆಗಣಿಗೊಬ್ಬರ, ಬೇವಿನ ಎಣ್ಣೆ ಮೊದಲಾದ ಪೋಷಕಾಂಶಗಳನ್ನು ನೀಡಿ ಆರೈಕೆ ಮಾಡುತ್ತಿದ್ದಾರೆ.

ADVERTISEMENT

ಅರಿಸಿನ:ಚಿಕ್ಕು ಹಾಗೂ ಮಾವಿನ ಮರಗಳ ನಡುವೆ ಮಧ್ಯಂತರ ಬೆಳೆಯಾಗಿ ಅರಿಸಿನ ಬೆಳೆದು ಆ ಕೃಷಿಯಿಂದಲೂ ಸಣ್ಣ ಪ್ರಮಾಣದ ವರಮಾನ ಪಡೆಯುತ್ತಿದ್ದಾರೆ.

ಮೂರು ಕರುಗಳು, ಮೂರು ಆಕಳು ಸೇರಿದಂತೆ ಆರು ದೇಸೀ ಗೋವುಗಳನ್ನು ಸಾಕಿದ್ದಾರೆ. ಗೋವುಗಳ ಸೆಗಣಿ ಮತ್ತು ಗಂಜಲವನ್ನು ಬೇಸಾಯಕ್ಕೆ ಬಳಸುತ್ತಿದ್ದಾರೆ. ಆಕಳ ಹಾಲಿನಿಂದ ತುಪ್ಪವನ್ನು ತಯಾರಿಸಿ ಮಾರುತ್ತಿದ್ದಾರೆ. ದೇಸೀ ಆಕಳ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಅವರ ಮನೆಯಲ್ಲಿ ತಯಾರಿಸಿದ ಆಕಳ ತುಪ್ಪಕ್ಕೆ ಪ್ರತಿ ಕೆ.ಜಿ.ಗೆ ₹1ಸಾವಿರಕ್ಕೂ ಅಧಿಕ ಬೆಲೆ ದೊರೆಯುತ್ತಿದೆ.

20 ಗುಂಟೆ ಕ್ಷೇತ್ರದ ಗದ್ದೆಯಲ್ಲಿ ಮಳೆಗಾಲದಲ್ಲಿ ಭತ್ತ ಮತ್ತು ಬೇಸಿಗೆಯಲ್ಲಿ ಹಸಿಮೆಣಸಿನಕಾಯಿ, ಹೆಸರು, ಕಡಲೆ, ಹಾಗಲಕಾಯಿ, ಗೋವಿನಜೋಳ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ಎಡೆಬಿಡದೇ ಮಳೆ ಸುರಿಯುತ್ತದೆ. ಹೀಗಾಗಿ, ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಭತ್ತ, ಕಬ್ಬು, ರಾಗಿ ಬಿಟ್ಟರೆ ಉಳಿದ ಯಾವ ಬೆಳೆಯನ್ನೂ ಬೆಳೆಯುವ ಗೋಜಿಗೆ ಹೋಗುವುದಿಲ್ಲ. ಆದರೆ, ವಿಮಲನಾಥ ಅವರು ಕೃಷಿಯನ್ನು ಖುಷಿಯಿಂದ ಕೈಗೊಂಡು ಭೂದೇವಿಯ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡಿದ್ದಾರೆ. ಕುಟುಂಬದ ಆರು ಸದಸ್ಯರೊಂದಿಗೆ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಖರ್ಚುಗಳನ್ನು ಕಳೆದು ಕೃಷಿ ಹಾಗೂ ತೋಟಗಾರಿಕೆಯಿಂದ ವಾರ್ಷಿಕ ಕನಿಷ್ಠ ₹ 2 ಲಕ್ಷ ಆದಾಯ ಬರುತ್ತಿದೆ. ಶ್ರಮಕ್ಕೆ ಪ್ರತಿಫಲ ಸಿಗುತ್ತಿದೆ ಎನ್ನುತ್ತಾರೆ ಅವರು.

‘ವಿಮಲನಾಥ ಅವರು ಯಶಸ್ವಿ ಕೃಷಿಕ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ಸಂಪೂರ್ಣ ಸಾವಯವ ಪದ್ಧತಿ ಕೈಗೊಂಡು ಮಾದರಿಯಾಗಿದ್ದಾರೆ. ದೇಸೀ ಹಸುಗಳನ್ನು ಸಾಕಿದ್ದಾರೆ. ಅವರ ಸಾಧನೆ ಗಮನಿಸಿ ಕೃಷಿ ಇಲಾಖೆಯಿಂದ ಗೌರವಿಸಲಾಗಿದೆ. ಆತ್ಮ, ಕೃಷಿ ಕ್ಷೇತ್ರ ಪಾಠಶಾಲೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿ ರೈತರಿಗೆ ಮಾರ್ಗದರ್ಶನ ಕೊಡಿಸಲಾಗುತ್ತಿದೆ’ ಎಂದು ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಆರ್.ನಾರಾಯಣಸ್ವಾಮಿ ಹೇಳುತ್ತಾರೆ.

ವಿಮಲನಾಥ ಅವರ ಸಂಪರ್ಕಕ್ಕೆ ಮೊ.ಸಂಖ್ಯೆ: 9743418284.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.