ADVERTISEMENT

ಅಥಣಿ: 16 ರಂದು ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:04 IST
Last Updated 11 ಆಗಸ್ಟ್ 2025, 2:04 IST
<div class="paragraphs"><p>ಕೃಷ್ಣಾರತಿ ಕಾರ್ಯಕ್ರಮದ ಜಾಹಿರಾತು ಬಿಡುಗಡೆ ಮಾಡುತ್ತಿರುವ ದೃಶ್ಯ</p></div>

ಕೃಷ್ಣಾರತಿ ಕಾರ್ಯಕ್ರಮದ ಜಾಹಿರಾತು ಬಿಡುಗಡೆ ಮಾಡುತ್ತಿರುವ ದೃಶ್ಯ

   

ಅಥಣಿ: ‘ಕೃಷ್ಣಾ ನದಿಯು ಗಂಗಾ ನದಿಯಷ್ಟೇ ಪವಿತ್ರವಾದದ್ದು, ನಮ್ಮ ನದಿಗಳು ಕೂಡ ದೇಶದ ಅಮೂಲ್ಯವಾದ ಸಂಪತ್ತು, ನದಿ ನೀರು ಕಲುಷಿತವಾಗದಂತೆ ಸಂರಕ್ಷಣೆ ಮತ್ತು ನದಿ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ನಿರಾಣಿ ಉದ್ಯೋಗ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ಅವರು ಅಥಣಿ ಪಟ್ಟಣದಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ ಹಮ್ಮಿಕೊಳ್ಳಲಾಗುವ ಕೃಷ್ಣಾರತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಥಣಿ ಮತ್ತು ಜಮಖಂಡಿ ಎರಡು ಸಹೋದರ ತಾಲ್ಲೂಕುಗಳು. ನದಿ ಪಾತ್ರದಲ್ಲಿರುವ ಹಿಪ್ಪರಗಿ ಗ್ರಾಮದಲ್ಲಿ ಇದೇ 16ರಂದು ಕೃಷ್ಣಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತರ ಭಾರತದ ನೂರಾರು ನಾಗಾ ಸಾಧುಗಳು, ಅಘೋರಿಗಳು, ತಪಸ್ವಿಗಳು, ರಾಜ್ಯಪಾಲರು, ಮಂತ್ರಿಗಳು ಹಾಗೂ ಶಾಸಕರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಿರಾಣಿ ಫೌಂಡೇಶನ್ ಹಾಗೂ ಕೃಷ್ಣಾರತಿ ಕಾರ್ಯಕ್ರಮ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ADVERTISEMENT

 ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ದಿನ ಅಂದರೆ ಬರುವ ಆಗಸ್ಟ್ 16 ರಂದು ಕೃಷ್ಣಾ ಪುಣ್ಯ ಸ್ನಾನ, ಕೃಷ್ಣಾ ನದಿಗೆ ಆರತಿ, ಶಾಸ್ತ್ರೀಯ ಸಂಗೀತ, ಕೃಷ್ಣಾ ನದಿಯ ಕುರಿತು ಉಪನ್ಯಾಸ, ಕುಂಭಮೇಳ, ಶೋಭಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಅಥಣಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು  ಭಾಗವಹಿಸಬೇಕು ಎಂದರು.

ಇತ್ತೀಚೆಗೆ ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎ. ಎ. ಹುದ್ದಾರ ಅವರನ್ನು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ನಿರಾಣಿ ಉದ್ಯೋಗ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ್ವರ ನಿರಾಣಿ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಮಾಜಿ ಜೀಪಂ ಸದಸ್ಯ ಸಿದ್ದಪ್ಪ ಮುದುಕಣ್ಣವರ, ರಮೇಶಗೌಡ ಪಾಟೀಲ, ಹನುಮಂತ ಯಲಶೆಟ್ಟಿ, ಗಿರೀಶ್ ಬುಟಾಳಿ, ವರ್ಧಮಾನ ಯಲಗುದ್ರಿ, ಮಲ್ಲಪ್ಪಾ ಹಂಚಿನಾಳ ,ಶಿವಾನಂದ ಕುಂಬಾರ, ಮುತ್ತಯ್ಯಾ ಕಾಡದೇವರಮಠ, ಬಸು ಹಿಪ್ಪರಗಿ, ಮಲ್ಲಪ್ಪ ಪೂಜಾರಿ, ಪ್ರಭಾಕರ ಚೌವ್ಹಾಣ, ಅಶೋಕ ದಾನಗೊಂಡ, ನಿಂಗಪ್ಪ ನಂದೇಶ್ವರ , ರಾಜೇಂದ್ರ ಐಹೊಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.