ಅಥಣಿ: ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ನಿರ್ಮಾಣದ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ರೈತರಿಗೆ ಶೇರು ಮಾಡಬೇಡಿ ಅಂತಾ ಕರೆ ಕೊಟ್ಟಿದ್ದರು. ಕಾರ್ಖಾನೆ ನಿರ್ಮಾಣದ ನಂತರ ಅಧಿಕಾರ ತಾವೇ ಅನುಭವಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾವ ಆರೋಪಿಸಿದರು.
ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯ ರೈತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಸಹಕಾರ ಸಕ್ಕರೆ ಕಾರಖಾನೆಯ ಸ್ಥಾಪನೆಯಲ್ಲಿ ಒಂದು ಪೈಸೆ ಕೊಡುಗೆ ಇಲ್ಲದ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತದಲ್ಲಿ ಅವ್ಯವಹಾರ ಮಾಡುವ ಮೂಲಕ ಪ್ರಸಕ್ತ ಸಾಲಿನಲ್ಲಿ ₹35 ಕೋಟಿ ನಷ್ಟ ಉಂಟು ಮಾಡಿದ್ದರು. ನೂರಾರು ಕೋಟಿ ಸಾಲ ಮಾಡುವ ಮೂಲಕ ಕಾರ್ಖಾನೆಗೆ ಆರ್ಥಿಕ ಹೊರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ದುರಾಡಳಿತ ಕೊನೆಗಾಣಿಸಿ ಕಾರ್ಖಾನೆ ಉಳಿಸಿ ಬೆಳೆಸಲು ರೈತ ಪೆನಲ್ ಮೂಲಕ ಚುನಾವಣೆ ಎದುರಿಸೋಣ. ಚುನಾವಣೆಯಲ್ಲಿ ಅನಿವಾರ್ಯವಾದಲ್ಲಿ ನಾನೂ ಸ್ಪರ್ಧೆ ಮಾಡಲು ಸಿದ್ಧನಿದ್ದು, ಸೋಲು ಗೆಲುವಿನ ಬಗ್ಗೆ ಗೊಂದಲ ಮಾಡಿಕೊಳ್ಳುವುದು ಬೇಡ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ 1980ರಲ್ಲಿ ನಿರ್ಮಾಣ ಚಾಲನೆ ನೀಡಿದರು. 2002ರಲ್ಲಿ ಪ್ರಾರಂಭಿಸಿದವರು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ. ಡೊಂಗರಗಾಂವ ಮನಸ್ಸು ಮಾಡಿದ್ದರೆ ಇಂದಿನ ಶಾಸಕ ಲಕ್ಷ್ಮಣ ಸವದಿಯವರಂತೆ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡದೇ ವಿಶೇಷ ಅಧಿಕಾರಿಗಳ ಮೂಲಕ ಕಾರ್ಖಾನೆ ನಡೆಸಿಕೊಂಡು ಬಂದರು. ಆದರೆ ಮುಂದೆ ತಮ್ಮ ಅಧಿಕಾರದ ಬಲದಿಂದ ಕಾರ್ಖಾನೆಯ ಬೆಳವಣಿಗೆಗೆ ಕಿಂಚಿತ್ತು ಕೊಡುಗೆ ಇಲ್ಲದ ಇಂದಿನ ಶಾಸಕರು ಕಾರ್ಖಾನೆಯನ್ನು ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡು ನೂರಾರು ಕೋಟಿ ಸಾಲ ಮಾಡಿ ಪ್ರಸಕ್ತ ಸಾಲಿನಲ್ಲಿ ₹35 ಕೋಟಿ ನಷ್ಟವನ್ನುಂಟು ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದು, ಇಂತವರಿಗೆ ಬುದ್ಧಿ ಕಲಿಸಲೇ ಬೇಕು ಎಂದರು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನಮ್ಮ ಜೊತೆ ಕಾರ್ಖಾನೆಯ ಚುನಾವಣೆಯಲ್ಲಿ ಕೈಜೋಡಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಮತ್ತು ಡೊಂಗರಗಾಂವ ಚರ್ಚಿಸುತ್ತೇವೆ ಎಂದರು.
ಬಿಜೆಪಿ ಅಥಣಿ ಮಂಡಳ ಅಧ್ಯಕ್ಷ ಗಿರೀಶ ಬುಟಾಳಿ ಮಾತನಾಡಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಸ್ಯರಿಗೆ ತಪ್ಪು ಮಾಹಿತಿ ನೀಡುತ್ತಾರೆ. ಕಾರ್ಖಾನೆಯ ಚುನಾವಣೆ ಕುರಿತು ನಾನು ವಿಚಾರಿಸಿದಾಗ ನನಗೂ ತಪ್ಪು ಮಾಹಿತಿ ನೀಡಿದರು ಎಂದ ಅವರು ಇಂತಹ ದುರಾಡಳಿತ ಕೊನೆಗಾಣಿಸಲು ರೈತರು ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವಕೀಲ ಸಂಪತ್ತಕುಮಾರ ಶೆಟ್ಟಿ ಮಾತನಾಡಿ, ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ₹2000 ತುಂಬಿ ಸದಸ್ಯತ್ವ ಪಡೆದುಕೊಂಡವರು ಇದೇ ಅಕ್ಬೋಬರ್ 15 ರೊಳಗಾಗಿ ಮತ್ತೆ ₹3000 ತುಂಬಬೇಕು. ಇಲ್ಲದೇ ಹೋದಲ್ಲಿ ಚುನಾವಣೆಯಲ್ಲಿ ಮತದಾನ ಹಕ್ಕು ಇರುವುದಿಲ್ಲ ಎಂದು ನೋಟಿಸ್ ಕೊಟ್ಟಿದ್ದಾರೆ. ಚುನಾವಣೆ ಬಂದಾಗೊಮ್ಮೆ ಇಂತಹ ಯಾವುದಾದರೊಂದು ನೆಪ ಮಾಡಿಕೊಂಡು ಸದಸ್ಯರು ಮತದಾನ ಮಾಡದಂತೆ ಇವರು ಮಾಡುತ್ತಾರೆ ಇದರ ಬಗೆಗೆ ನಾವೆಲ್ಲ ಯೋಚನೆ ಮಾಡಬೇಕಿದೆ ಎಂದರು.
ಸಭೆಯಲ್ಲಿ ಧುರೀಣರಾದ ಎಸ್‌ಎ.ಮುದಕಣ್ಣವರ, ಅಪ್ಪಸಾಹೇಬ ಅವತಾಡೆ, ಉಮೇಶ ಬಂಟೋಡಕರ, ನಿಂಗಪ್ಪ ನಂದೇಶ್ವರ, ಶಶಿಕಾಂತ ಗುರೂಜಿ, ಸತ್ಯಪ್ಪ ಬಾಗೆನ್ನವರ, ಮಲ್ಲಪ್ಪ ಹಂಚುನಾಳ, ಅನೀಲ ಸೌದಾಗರ ಸೇರಿದಂತೆ ಅನೇಕರು ಮಾತನಾಡಿದರು.
ಮಾಜಿ ಶಾಸಕರಾದ ಶಹಜಹಾನ ಡೊಂಗರಗಾಂವ ಹಾಗೂ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖನೆಯ ಆಡಳಿತ ಮಂಡಳಿಯ ಚುನಾವಣೆ ಎದುರಿಸೋಣ ಎಂದು ಸಭೆ ಸೇರಿ ರೈತ ಮುಖಂಡರು, ಕಾರ್ಖನೆ ಶೇರುದಾರರು ನಿರ್ಣಯ ಕೈಗೊಂಡರು.
ಈ ವೇಳೆ ಜಿನಗೌಡ ಪಾಟೀಲ,ಮಲ್ಲಪ್ಪಾ ಹಂಚಿನಾಳ, ಸುರೇಶ ಅವಟಿ, ಶಿವಾನಂದ ಐಗಳಿ, ದೀಪಕ್ ಪಾಟೀಲ, ಸೌರಭ ಮಾಶಾಳ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.