ADVERTISEMENT

ಬೆಳಗಾವಿ| ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:49 IST
Last Updated 12 ನವೆಂಬರ್ 2025, 2:49 IST
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ರಾಮಕೃಷ್ಣ ಮಾತನಾಡಿದರು
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ರಾಮಕೃಷ್ಣ ಮಾತನಾಡಿದರು   

ಬೆಳಗಾವಿ: ‘ಇಂದು ಸಮಾಜದಲ್ಲಿ ಯಾವುದೇ ಸಂಗತಿಯನ್ನು ವಿಮರ್ಶಾತ್ಮಕವಾಗಿ ಕಾಣಬೇಕು. ಅದರಲ್ಲೂ ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಚಿಂತಕ ಮತ್ತು ಪತ್ರಕರ್ತ ಜಿ.ರಾಮಕೃಷ್ಣ ಹೇಳಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ವೈಚಾರಿಕ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಈಗ ಸತ್ಯಕ್ಕಿಂತ ಸುಳ್ಳು ವಿಷಯಗಳೇ ವಿಜೃಂಭಿಸುತ್ತಿವೆ. ಭಾವನಾತ್ಮಕ ವಿಚಾರಗಳು ಮುನ್ನೆಲೆಗೆ ಬಂದು, ವೈಚಾರಿಕತೆಗೆ ಹಿನ್ನಡೆಯಾಗುತ್ತಿದೆ. ಜನರಲ್ಲಿ ಪ್ರಶ್ನಿಸುವ ಗುಣ ಕುಸಿಯುತ್ತಿದೆ. ವಿವಿಧ ವಿಷಯಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುವ ಕೆಲಸವೂ ನಡೆದಿದೆ. ಹಾಗಾಗಿ, ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು. ಯಾವುದೇ ವಿಷಯವನ್ನಾದರೂ ಪರಾಮರ್ಶಿಸದೆ ಒಪ್ಪಿಕೊಳ್ಳಬಾರದು’ ಎಂದು ಕರೆಕೊಟ್ಟರು.

ADVERTISEMENT

‘ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳದಿದ್ದರೆ, ಮುಂದೆ ದೊಡ್ಡ ಅಪಾಯವಿದೆ’ ಎಂದು ಎಚ್ಚರಿಕೆ ಕೊಟ್ಟರು.

ಬಹುಮಾನ ವಿತರಣೆ: ರಾಜ್ಯಮಟ್ಟದ ಯುವ ಕಥೆ ಸ್ಪರ್ಧೆಯಲ್ಲಿ ಸಾಧನೆಗೈದ ಮಣಿಕಂಠ ಗೊದಮನಿ(ಪ್ರಥಮ), ಸಂತೋಷ ನಾಯಿಕ(ದ್ವಿತೀಯ), ಪ್ರಹ್ಲಾದ ಡಿ.ಎಂ. (ತೃತೀಯ), ರಾಜ್ಯಮಟ್ಟದ ಯುವ ಕಾವ್ಯ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾ(ಪ್ರಥಮ), ಮಂಜುಳಾ ಜಿ.ಎಚ್‌. (ದ್ವಿತೀಯ), ಶಿವರಾಜ ಅರಳಿ(ತೃತೀಯ) ಮತ್ತು ಶ್ರೀ ಮುದ್ರಾಡಿ(ನಾಲ್ಕನೇ) ಅವರಿಗೆ ಬಹುಮಾನ ವಿತರಿಸಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ, ಧಾರವಾಡದ ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕಿ ಅನುಸೂಯಾ ಕಾಂಬಳೆ ಅಭಿನಂದನಾ ನುಡಿಗಳನ್ನಾಡಿದರು.

ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ಕೆ.ಎಚ್.ಚೆನ್ನೂರ, ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸದಸ್ಯರಾದ ಎಚ್‌.ಬಿ.ಕೋಲಕಾರ, ಮಹಾಲಿಂಗ ಮಂಗಿ, ಗೀತಾಂಜಲಿ ಕುರುಡಗಿ, ಜಗನ್ನಾಥ ಗೇನನ್ನವರ, ರವೀಂದ್ರ ಕುಲಕರ್ಣಿ ಇತರರಿದ್ದರು. 

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು
ಇದು ಸಂವಿಧಾನದ ಕಾಲ. ಇಂದು ಸಂವಿಧಾನವೇ ನಮ್ಮ ಸಾಂಸ್ಕೃತಿಕ  ಭಾಷೆಯಾಗಬೇಕು. ಆಗ ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲ ಸಮಸ್ಯೆಗಳಿಗೂ ತ್ವರಿತ ಪರಿಹಾರ ಸಿಗುತ್ತದೆ
ಆರಿಫ್‌ ರಾಜಾ ಕವಿ
ಇಂದು ವಿಚಾರವಾದದ ಬಗ್ಗೆ ಮಾತನಾಡುವುದು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅನುಷ್ಠಾನಗೊಳಿಸುವುದು ಕಷ್ಟ. ಸಮಾಜವನ್ನು ಸೌಹಾರ್ದದತ್ತ ಕೊಂಡೊಯ್ಯುವಂತೆ ಎಲ್ಲರೂ ಬರೆಯಬೇಕು
ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ

ಪ್ರಶಸ್ತಿಗಳ ಪ್ರದಾನ

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ವತಿಯಿಂದ ನಾಡಿನ ಹಿರಿಯ ಸಾಹಿತಿಗಳು ಮತ್ತು ಯುವ ಸಾಹಿತಿಗಳಿಗೆ ವಾರ್ಷಿಕ ಪ್ರಶಸ್ತಿ ‍ಪ್ರದಾನ ಮಾಡಲಾಯಿತು. ಬೆಂಗಳೂರಿನ ಕವಿ ಎಚ್‌.ಎಸ್‌.ಶಿವಪ್ರಕಾಶ ಅವರಿಗೆ 2023ನೇ ಸಾಲಿನ ಕಾವ್ಯ ಪ್ರಶಸ್ತಿ ದಾವಣಗೆರೆಯ ಕಥೆಗಾರ್ತಿ ಬಿ.ಟಿ.ಜಾಹ್ನವಿ ಅವರಿಗೆ 2025ನೇ ಸಾಲಿನ ಕಥಾ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಗಳು ತಲಾ ₹50 ಸಾವಿರ ನಗದು ಬಹುಮಾನ ಹೊಂದಿವೆ. ಶಿವಮೊಗ್ಗದ ಕೆ.ಅಕ್ಷತಾ ಮಂಗಳೂರಿನ ವಿಲ್ಸನ್‌ ಕಟೀಲ್‌ ಮತ್ತು ರಾಯಚೂರಿನ ಆರಿಫ್‌ ರಾಜಾ ಅವರಿಗೆ 2023 2024 ಹಾಗೂ 2025ನೇ ಸಾಲಿನ ಯುವ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಪುರಸ್ಕಾರಗಳು ತಲಾ ₹10 ಸಾವಿರ ನಗದು ಬಹುಮಾನ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.