ADVERTISEMENT

ಟ್ರ್ಯಾಕ್ಟರ್‌ ತಡೆದರೆ ವಿಧಾನಸೌಧಕ್ಕೆ ಮುತ್ತಿಗೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 16:03 IST
Last Updated 8 ಡಿಸೆಂಬರ್ 2024, 16:03 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೆಳಗಾವಿ: ‘2ಎ ಮೀಸಲಾತಿಗೆ ಆಗ್ರಹಿಸಿ ಡಿ.10ರಂದು ನಾವು ಮಾಡಲಿರುವ ಪ್ರತಿಭಟನೆಯಲ್ಲಿ ಪಾ‌ಲ್ಗೊಳ್ಳಲು ಡಿ.9, 10ರಂದು ಬೆಳಗಾವಿ ಜಿಲ್ಲೆಯಿಂದ ಟ್ರ್ಯಾಕ್ಟರ್‌, ಕ್ರೂಸರ್‌ ವಾಹನಗಳು ಬರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನು ಹಿಂಪಡೆಯದಿದ್ದರೆ, ಕಾಲ್ನಡಿಗೆ ಮೂಲಕವೇ 10ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘5 ಸಾವಿರ ಟ್ರ್ಯಾಕ್ಟರ್‌ ಮೆರವಣಿಗೆಯೊಂದಿಗೆ ನಾವು ಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ. ಟ್ರ್ಯಾಕ್ಟರ್‌ ತಡೆದರೆ ಕಾಲ್ನಡಿಗೆ ಮೂಲಕ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಅದೂ ಸಾಧ್ಯವಾಗದಿದ್ದರೆ ಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ’ ಎಂದರು.

‘ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಳೇ ಮೈಸೂರು ಭಾಗದವರು. ಅವರು ಉತ್ತರ ಕರ್ನಾಟಕದ ಜನಪರ ಹೋರಾಟ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ನಾವು ಕರ್ನಾಟಕದಲ್ಲಿ ಜೀವನ ನಡೆಸುತ್ತಿದ್ದೇವೆಯೋ ಅಥವಾ ಜಮ್ಮು–ಕಾಶ್ಮೀರದಲ್ಲಿ ವಾಸಿಸುತ್ತಿದ್ದೇವೆಯೋ ಎಂಬ ಅನುಮಾನ ಮೂಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ನಾವು ಸಮುದಾಯದ ಜನರಿಗಾಗಿ ಹೋರಾಡುತ್ತಿದ್ದೇವೆ. ನೀವು ಜನರ ಕಷ್ಟಗಳನ್ನೇ ಕೇಳದಿದ್ದರೆ, ಇಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನೇಕೆ ಮಾಡುತ್ತೀರಿ’ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.