ADVERTISEMENT

ಚಿಕ್ಕೋಡಿಯ ಗಾಂಧಿ ಮಾರುಕಟ್ಟೆ: ಗುರುವಾರ ಸಂತೆಯಲ್ಲಿ ಸಮಸ್ಯೆಗಳ ಕಂತೆ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:51 IST
Last Updated 21 ಜುಲೈ 2025, 2:51 IST
ನೆರಳಿನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಳೆ ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿರುವುದು
ನೆರಳಿನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಳೆ ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿರುವುದು   

ಚಿಕ್ಕೋಡಿ: ಇಲ್ಲಿನ ಗಾಂಧಿ ಮಾರುಕಟ್ಟೆಯಲ್ಲಿ ನಾಲ್ಕೈದು ದಶಕಗಳಿಂದ ಪ್ರತಿ ಗುರುವಾರ ಸಂತೆ ನಡೆಯುತ್ತಿದೆ. ಆದರೆ, ಪುರಸಭೆ ಅಧಿಕಾರಿಗಳು ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ. ಅಶುಚಿತ್ವದಿಂದ ಕೂಡಿದ ಸ್ಥಳ ದುರ್ವಾಸನೆ ಬೀರುತ್ತಿದೆ. 

ಸಂತೆ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು,  ಜನರು ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.

ಪಟ್ಟಣದ ಜನಸಂಖ್ಯೆ 40 ಸಾವಿರ ಮೀರಿದೆ. ಆದರೆ, ಇಂದಿಗೂ ಇಕ್ಕಟ್ಟಾದ ಸ್ಥಳದಲ್ಲೇ ಸಂತೆ ನಡೆಯುತ್ತಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ.

ADVERTISEMENT

ಒಂದೆಡೆ ಗುರುವಾರ ಪೇಟೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ. ಮತ್ತೊಂದೆಡೆ ವಾರದ ಸಂತೆ ನಡೆಯುವ ಸ್ಥಳದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಎಲ್ಲೆಂದರಲ್ಲಿ ಕಲ್ಲು–ಮಣ್ಣು ಎಸೆಯಲಾಗಿದೆ.

ಇನ್ನೊಂದೆಡೆ ಸಂತೆಗೆ ತೆರಳುವ ಮಾರ್ಗದ ರಸ್ತೆಯಲ್ಲೇ ಗ್ಯಾಸ್ ಪೈಪ್‌ಲೈನ್‌ ಅಳವಡಿಕೆಗಾಗಿ ಗುಂಡಿ ತೆಗೆದು, ಎರಡು–ಮೂರು ವಾರಗಳಿಂದಲೂ ಮುಚ್ಚದೇ ಇರುವುರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. 

ನೆರಳಿನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಳೆ ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿರುವುದು

ಹಂದಿಗಳ ಕಾಟ: ವಾರದ ಸಂತೆ ನಡೆಯುವ ಜಾಗದಲ್ಲಿ ವ್ಯಾಪಾರಿಗಳಿಗೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ತ್ಯಾಜ್ಯ ಪದಾರ್ಥ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಹಂದಿಗಳ ಕಾಟ ಮಿತಿಮೀರಿದೆ. ಮಳೆ ಬಂದರೆ ವ್ಯಾಪಾರಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. 

ಕೆಲವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಪ್ರವೇಶದ್ವಾರದ ಎದುರು ಹಾಗೂ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. 

ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಸ್ಥಳದ ಬಳಿಯೇ ತ್ಯಾಜ್ಯ ಎಸೆದಿರುವುದು

‘ವಾರಕ್ಕೊಮ್ಮೆ ಇಲ್ಲಿ ಸಂತೆ ನಡೆದರೂ, ಕೆಲ ವ್ಯಾಪಾರಿಗಳು ಪ್ರತಿದಿನ ವ್ಯಾಪಾರ ಮಾಡುತ್ತಾರೆ. ಆದರೆ, ಪೌರ ಕಾರ್ಮಿಕರು ವಾರಕ್ಕೆ ಎರಡೇ ಸಲ ಇಲ್ಲಿಗೆ ಬಂದು ಸ್ವಚ್ಛತಾ ಕೆಲಸ ಕೈಗೊಳ್ಳುತ್ತಾರೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸ್ಥಳೀಯರಿಗೂ ತೊಂದರೆಯಾಗಿದೆ. ಸಂತೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಿದೆ’ ಎಂಬ ಆರೋಪ ಕೇಳಿಬರುತ್ತಿದೆ.

ಚಿಕ್ಕೋಡಿಯ ಗುರುವಾರ ಪೇಟೆ–ಗಾಂಧಿ ಮಾರುಕಟ್ಟೆ ಮಾರ್ಗದ ಸ್ಥಳದಲ್ಲಿ ಗ್ಯಾಸ್ ಪೈಪ್‌ಲೈನ್‌ ಅಳವಡಿಕೆಗಾಗಿ ತೋಡಿರುವ ಗುಂಡಿಯನ್ನು ಸಾರ್ವಜನಿಕರು ಹರಸಾಹಸ ಪಟ್ಟು ದಾಟುತ್ತಿರುವುದು
ಚಿಕ್ಕೋಡಿ ಪುರಸಭೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ವ್ಯಾಪಾರಿಗಳಿಂದ ಸಾಕಷ್ಟು ಹಣ ಪಡೆಯುತ್ತಾರೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ಸೌಲಭ್ಯ ಕಲ್ಪಿಸಿಲ್ಲ
ಹೌಸಾಬಾಯಿ ದಾನನ್ನವರ  ಗ್ರಾಹಕರು ಉಮರಾಣಿ
ಈ ಸಂತೆಗೆ ಸುತ್ತಲಿನ 20 ಗ್ರಾಮಗಳಿಂದ ಜನರು ಬರುತ್ತಾರೆ. ಆದರೆ ಕನಿಷ್ಠ ಮೂಲಸೌಕರ್ಯ ದೊರಕದೆ ತೊಂದರೆ ಅನುಭವಿಸುತ್ತಿದ್ದಾರೆ
ಸುವರ್ಣಾ ಚಿಕ್ಕಲಕಿ ಗ್ರಾಹಕರು ಚಿಕ್ಕೋಡಿ
ಸಂತೆಗೆ ಬರುವವರ ವಾಹನಗಳ ನಿಲುಗಡೆಗಾಗಿ ಸೂಕ್ತ ವ್ಯವಸ್ಥೆ ಮಾಡಬೇಕು
ಮೋಹಿತ ಢಾಕೆ ವ್ಯಾಪಾರಿ ಚಿಕ್ಕೋಡಿ
ಸಂತೆ ನಡೆಯುವ ಸ್ಥಳದಲ್ಲಿ ಸಾಮೂಹಿಕ ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಜನರ ಗೋಳು ಹೇಳತೀರದಾಗಿದೆ. ತಕ್ಷಣವೇ ಶೌಚಗೃಹ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು
ಶಾನವಾಜ್ ಬಾಗವಾನ್ ಅಧ್ಯಕ್ಷ ಬೀದಿಬದಿ ವ್ಯಾಪಾರಸ್ಥರ ಸಂಘ ಚಿಕ್ಕೋಡಿ
ಸಂತೆಯ ಸ್ಥಳದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು
ಚಿದಂಬರ ಕುಲಕರ್ಣಿ ತಹಶೀಲ್ದಾರ್‌ ಚಿಕ್ಕೋಡಿ
‘ಬೇರೆಡೆ ಸಂತೆ ಸ್ಥಳಾಂತರವಾಗಲಿ’
ಚಿಕ್ಕೋಡಿ ಪುರಸಭೆ ಅಧಿಕಾರಿಗಳು ವ್ಯಾಪಾರಿಗಳಿಂದ ಲಕ್ಷಾಂತರ ರೂಪಾಯಿ ಕರ ವಸೂಲಿ ಮಾಡುತ್ತಾರೆ. ಆದರೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸದೆ ಜಾಣಮೌನ ವಹಿಸಿದ್ದಾರೆ. ಹಾಗಾಗಿ ಈ ಸಂತೆಯನ್ನೇ ಸುಸಜ್ಜಿತ ಹಾಗೂ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗು ಸಾರ್ವಜನಿಕರದ್ದು.
ಸಾಮೂಹಿಕ ಶೌಚಗೃಹವೇ ಇಲ್ಲ
ಪ್ರತಿವಾರ ಇಲ್ಲಿ ನಡೆಯುವ ಸಂತೆಗೆ 5 ಸಾವಿರದಿಂದ 10 ಸಾವಿರ ಗ್ರಾಹಕರು ಆಗಮಿಸುತ್ತಾರೆ. 500ಕ್ಕೂ ಅಧಿಕ ವ್ಯಾಪಾರಿಗಳು ಸೇರುತ್ತಾರೆ. ಆದರೆ ಇಲ್ಲಿ ಸಾಮೂಹಿಕ ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಪ್ರತಿಯೊಬ್ಬರೂ ಪರದಾಡುವಂತಾಗಿದೆ. ನೈಸರ್ಗಿಕ ಕರೆ ಬಂದರೆ ಎಲ್ಲರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ.  ಇಕ್ಕಟ್ಟಿನಿಂದ ಕೂಡಿದ ಮಾರುಕಟ್ಟೆಯಲ್ಲೇ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಅಲ್ಲಿಗೆ ಹೋಗಿ ಬರಲು ಮಕ್ಕಳಿಗೂ ತೊಂದರೆಯಾಗುತ್ತಿದೆ. ಸಂತೆಗೆ ಬರುವವರು ತಮ್ಮ ವಾಹನಗಳ ನಿಲುಗಡೆಗೆ ಸ್ಥಳ ಹುಡುಕುವುದರಲ್ಲೇ  ಹೈರಾಣಾಗುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.