ADVERTISEMENT

ದಾಖಲೆಗಳಿದ್ದರೆ ತಕ್ಷಣ ಬಿಡುಗಡೆ ಮಾಡಿ: ರಮೇಶ ಜಾರಕಿಹೊಳಿಗೆ ಲಕ್ಷ್ಮಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 8:43 IST
Last Updated 15 ಏಪ್ರಿಲ್ 2022, 8:43 IST
ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ
ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಸಿ.ಡಿ. ಪ್ರಕರಣದ ಹಿಂದೆ ಯಾರಿದ್ದಾರಂತೆ? ಅದನ್ನು ಮೊದಲು ಬಿಚ್ಚಿಡಲಿ. ಏನಾದರೂ ದಾಖಲೆಗಳಿದ್ದರೆ ಜನರನ್ನು ಕಾಯಿಸುವುದು ಬೇಡ. ತಕ್ಷಣವೇ ಬಿಡುಗಡೆ ಮಾಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು’.

– ‘ನನ್ನ ವಿರುದ್ಧದ ಸಿಡಿ ಹಾಗೂ ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿಂದೆ ಷಡ್ಯಂತ್ರ ಮಾಡಿರುವ ಮಹಾನಾಯಕನ ಬಗ್ಗೆ ಶೀಘ್ರವೇ ವಿವರ ನೀಡುತ್ತೇನೆ’ ಎಂಬ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮೇಲಿನಂತೆ ತಿರುಗೇಟು ನೀಡಿದರು.

ತಾಲ್ಲೂಕಿನ ಪಂತಬಾಳೇಕುಂದ್ರಿಯಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿ, ‘ಕಾರ್ಯಾದೇಶ ಪತ್ರವಿಲ್ಲದೆ, ಆಡಳಿತಾತ್ಮಕ–ತಾಂತ್ರಿಕ ಅನುಮೋದನೆ ಇಲ್ಲದೆ, ಟೆಂಡರ್ ಆಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಂದ ಕೆಲಸ ಮಾಡಿಸಿದವರಾರು? ಯಾರ ಕುಮ್ಮಕ್ಕಿತ್ತು, ಒತ್ತಡವಿತ್ತು. ₹ 4 ಕೋಟಿ ಕೆಲಸವನ್ನು ಯಾರ ಆಶ್ವಾಸನೆ ಮೇಲೆ ಮಾಡಿದ್ದಾರೆ? ನಾನು ಕ್ಷೇತ್ರದ ಶಾಸಕಿ ಇರಬಹುದು. ಆದರೆ, ಅಕ್ಕನಿಗೆ ಸಹಾಯ ಆಗಲೆಂದೇನೂ ಅವರು ಕೆಲಸ ಕೈಗೊಂಡಿಲ್ಲ. ಊರಿನ ಅಭಿವೃದ್ಧಿಗೆ, ಪಕ್ಷಕ್ಕೆ ಮತ್ತು ಆಗಿನ ಜಿಲ್ಲಾ ಉಸ್ತುವಾರಿ ಸಚಿವ (ರಮೇಶ ಜಾರಕಿಹೊಳಿ)ರಿಗೆ ಹೆಸರು ಬರಲೆಂದು ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಹಿಂದೆ ಸರಿಯೋಲ್ಲ:‘ನೂರೆಂಟು ಕಾಮಗಾರಿಗಳನ್ನು ಎಲ್ಲಿ ಮಾಡಿದ್ದಾರೆ ಎಂದು ತೋರಿಸಿದವರಿಗೆ ಪ್ರಶಸ್ತಿ ಕೊಡುತ್ತೇನೆ’ ಎಂದು ನೀವು ಹೇಳಿದ್ದನ್ನು ಬಿಜೆಪಿಯವರು ಟ್ರೋಲ್ ಮಾಡುತ್ತಿದ್ದಾರಲ್ಲಾ’ ಎಂಬ ಪ್ರಶ್ನೆಗೆ, ‘ಮಾಡಲಿ. ಸ್ವಾಗತಿಸುತ್ತೇನೆ. ಅದರಿಂದ ಹಿಂದೆ ಸರಿಯುವುದಿಲ್ಲ. ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ? ಅವರ ಗಮನಕ್ಕೆ ತಂದರೂ ಮಾಡಿಲ್ಲ. ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ. ಇಡೀ ಪುಟ ಬಂದಿದ್ದ ಜಾಹೀರಾತನ್ನೆ ತೋರಿಸಿದ್ದೇನೆ. ಕಾಮಗಾರಿಯಂತೂ ಆಗಿದೆ. ಅದು ಕಳಪೆ ಆಗಿದೆಯೋ, ಗುಣಮಟ್ಟದಿಂದ ಕೂಡಿದೆಯೋ ಆ ವರದಿ ಕೊಡುವವರಾರು? ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕಲ್ಲವೇ?’ ಎಂದು ಕೇಳಿದರು.

‘ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರಿಂದ ಮತ್ತು ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರಿಗೆ ಗೊತ್ತಿದ್ದೇ ಸಂತೋಷ್ ಕೆಲಸ ಮಾಡಿದ್ದಾರೆ. ಈಗ ಅವರಿಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಹೋರಾಡುತ್ತಿದ್ದೇವೆ’ ಎಂದರು.

ಗಮನಕ್ಕೆ ಬಂದಿಲ್ಲ ಎನ್ನುವುದು ಸರಿಯಲ್ಲ:‘ಸಂತೋಷ್ ಕೆಲಸ ಮಾಡಿರುವುದನ್ನು ಸಚಿವ ಮುರುಗೇಶ ನಿರಾಣಿ, ರಮೇಶ ಹಾಗೂ ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಒಪ್ಪಿಕೊಂಡಿದ್ದಾರೆ. ಅವನು ನಮ್ಮ ಕಾರ್ಯಕರ್ತ ಎಂದು ರಮೇಶ ಹೇಳಿದ್ದಾರೆ. ಇನ್ನೊಂದೆಡೆ, ಬಿಜೆಪಿಯವರು ಆತ ನಮ್ಮ ಕಾರ್ಯಕರ್ತನೇ ಅಲ್ಲ ಎಂದಿದ್ದಾರೆ. ಈ ಗೊಂದಲವನ್ನು ಬಿಜೆಪಿಯವರು ಬಗೆಹರಿಸಿಕೊಳ್ಳಲಿ’ ಎಂದು ಟೀಕಿಸಿದರು.

‘ಸಂತೋಷ್‌ ಕೆಲಸ ಮಾಡಿದಾಗ ರಮೇಶ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ನಾನು ಸಂತೋಷ್‌ ಕರೆಸಿ ವಿಚಾರಿಸಲು ಹಲವು ಬಾರಿ ಪ್ರಯತ್ನಿಸಿದ್ದೆ.ಅವನು ಬಂದಿರಲಿಲ್ಲ. ನಾನು ಬಿಜೆಪಿ, ಬಿಜೆಪಿ ಎನ್ನುತ್ತಿದ್ದ. ರಮೇಶ ಬೆಂಬಲಿಗ ಎನ್ನುತ್ತಿದ್ದ. ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎನ್ನುವುದು ಸರಿಯಲ್ಲ. ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷರ ವಿರುದ್ಧವೂ ತನಿಖೆಯಾಗಲಿ’ ಎಂದರು.

‘ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನುವುದು ನಮ್ಮ ಹೋರಾಟದ ಪ್ರಮುಖ ಬೇಡಿಕೆ. ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರಾರುಎನ್ನುವುದಕ್ಕೆ ಸಾಕ್ಷಿಗಳಿವೆ. ಮತ್ತೇಕೆ ಸರ್ಕಾರವು ಮೀನಮೇಷ ಎಣಿಸುತ್ತಿದೆ? ಇಂಥವರನ್ನು ಕಾಪಾಡಿದರೆ ಗುತ್ತಿಗೆದಾರರ ಅಳಲನ್ನು ಕೇಳುವವರು ಯಾರು’ ಎಂದು ಪ್ರಶ್ನಿಸಿದರು.

‘ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಇಲ್ಲಿ ಏ.17ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯದಾದ್ಯಂತ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.