ADVERTISEMENT

ಸಿ.ಟಿ.ರವಿ ‘ಆ’ ಮಾತು ಬಳಸಿದ್ದು ನಿಜ: ಗದ್ಗದಿತರಾದ ಲಕ್ಷ್ಮೀ ಹೆಬ್ಬಾಳಕರ

ರಾಜ್ಯದ ಮಹಿಳೆಯರ ಪ್ರತಿನಿಧಿ ನಾನು, ನಾನೇಕೆ ಸುಳ್ಳು ಹೇಳಲಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 5:57 IST
Last Updated 20 ಡಿಸೆಂಬರ್ 2024, 5:57 IST
   

ಬೆಳಗಾವಿ: ‘ಸಿ.ಟಿ ರವಿ ಅವರು ಚಿಂತಕರ ಚಾವಡಿಯಲ್ಲಿ ‘ಆ’ ಮಾತು ಬಳಸಿದ್ದು ನಿಜ. ನಾನು ಇಡೀ ರಾಜ್ಯದ ಮಹಿಳೆಯರ ಪ್ರತಿನಿಧಿ. ನಾನೇಕೆ ಸುಳ್ಳು ಹೇಳಲಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗದ್ಗದಿತರಾದರು.

ಇಲ್ಲಿನ ಅವರ ಗೃಹಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿ.ಟಿ.ರವಿ ಅವರನ್ನು ಅಮಾನತು ಮಾಡುವ ಬಗ್ಗೆ ನಾನೇನೂ ಮಾತನಾಡಲಾರೆ’ ಎಂದರು.

‘ನಾಗರಿಕ ಸಮಾಜದಲ್ಲಿ, ರಾಜಕಾರಣದಲ್ಲಿ ಬಹಳಷ್ಟು ಧೈರ್ಯದಿಂದ ಮುಂದೆ ಬಂದಿದ್ದೇನೆ. ಸಾಮಾನ್ಯ ಕಾರ್ಯಕರ್ತೆಯಿಂದ ಸಚಿವೆ ಸ್ಥಾನದವರೆಗೆ ಬೆಳೆದಿದ್ದೇನೆ. ನನ್ನನ್ನು ನೋಡಿ ಸಾವಿರಾರು ಮಹಿಳೆಯರು ರಾಜಕಾರಣಕ್ಕೆ ಬರಬೇಕು ಎಂದು ಕನಸು ಕಾಣುತ್ತಾರೆ. ನನ್ನಂಥವರಿಗೇ ಹೀಗೆ ಮಾತನಾಡಿದರು ಅವರಿಗೆ ಏನು ಅನ್ನಿಸಬೇಕು’ ಎಂದರು.

ADVERTISEMENT

‘ಅವರು ರಾಹುಲ್‌ ಗಾಂಧಿ ಅವರಿಗೆ ಡ್ರಗ್‌ ಅಡಿಕ್ಟ್‌ ಎಂದು ನಾಲ್ಕು ಬಾರಿ ಹೇಳಿದರು. ಆಗ ನಾನು ‘ನೀವೂ ಅಪಘಾತ ಪಡಿಸಿ ಸಾಯಿಸಿದ್ದೀರಿ. ನಿಮ್ಮನ್ನು ಕೊಲೆಗಡುಕ ಅನ್ನಬಹುದೇ’ ಎಂದು ನಾನು ಅಂದಿದ್ದು ನಿಜ.

‘ನಾನು ಹೇಳಿದ ಮಾತನ್ನು ಒಪ್ಪಿಕೊಳ್ಳುತ್ತಿದ್ದೇನೆ. ಆದರೆ, ಅವರು ಒಪ್ಪಿಕೊಳ್ಳದೇ ಸುಳ್ಳು ಹೇಳುತ್ತಿದ್ದಾರೆ. ಮಾಧ್ಯಮವರು ಎಲ್ಲ ತೋರಿಸಿದ್ದೀರಿ. ಇದರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಕಣ್ಣೀರು ಹಾಕಿದರು.

‘ನನ್ನನ್ನು ಒಂದಲ್ಲ ಹತ್ತು ಬಾರಿ ‘ಆ’ ‍ಪದ ಬಳಸಿ ನಿಂದಿಸಿದ್ದಾರೆ.

ನಾನು ಇಂಥದ್ದಕ್ಕೆಲ್ಲ ಹೆದರುವವಳಲ್ಲ. ಆದರೆ, ನಾನೂ ಒಬ್ಬ ತಾಯಿ, ಒಬ್ಬ ಮಗಳು, ಒಬ್ಬ ಸೊಸೆ ‘ಆ’ ಮಾತು ನನ್ನನ್ನು ನೋಯಿಸಿದೆ’ ಎಂದರು.

‘ವಿಧಾನ ಪರಿಷತ್ತು ಹಿರಿಯರ ಚಾವಡಿ, ಬುದ್ಧವಂತರ ವೇದಿಕೆ. ಆ ವೇದಿಕೆಯಲ್ಲಿ ಬಹಳಷ್ಟು ಪ್ರಬುದ್ಧವಾಗಿ ಮಾತನಾಡಬೇಕು. ಅಂಥಲ್ಲೇ ಆ ಮಾತು ಹೇಳಿದ್ದಾರೆ. ಕೇಳಿದ ಕೆಲವರು ನನ್ನ ಬಳಿ ಬಂದು ಸಾರಿ ಅವರು ಹಾಗೆ ಅನ್ನಬಾರದಿತ್ತು ಎನ್ನುತ್ತಾರೆ. ಆದರೆ, ಒಬ್ಬರೂ ನೇರವಾಗಿ ಖಂಡಿಸಲಿಲ್ಲ’ ಎಂದೂ ನೋವಿನಿಂದ ಹೇಳಿದರು.

‘ನನ್ನ ಮಗ, ಸೊಸೆ ನನಗೆ ಫೋನ್‌ ಮಾಡಿದ್ದಾರೆ. ಸೊಸೆ ಆಸ್ಪತ್ರೆಗೆ ಹೋಗಿದ್ದಾರೆ. ಫೋನ್ ಮಾಡಿದ ಅವರು ‘ಅಮ್ಮ ನೀವು ಸೇನಾನಿ. ಇಂಥದ್ದಕ್ಕೆ ಕುಸಿಯಬೇಡಿ. ನಾವು ನಿಮ್ಮೊಂದಿಗೆ ಇದ್ದೇವೆ’ ಎಂದು ಸಮಾಧಾನ ಹೇಳಿದ್ದಾರೆ. ನನ್ನ ಕ್ಷೇತ್ರದ ಜನ, ನನ್ನ ರಾಜ್ಯದ ಜನ ನನ್ನೊಂದಿಗೆ ಇದ್ದಾರೆ ಎಂಬ ಧೈರ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.