ಮೂಡಲಗಿ: ತಾಲ್ಲೂಕಿನ ತುಕ್ಕಾನಟ್ಟಿಯ ಲಕ್ಷ್ಮೀದೇವಿ ಜಾತ್ರೆಯ ರಥೋತ್ಸವವು ಸೋಮವಾರ ಅಪಾರ ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಮತ್ತು ಉಡಿ ತುಂಬಿದರು. ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವವು ವಿವಿಧ ವಾದ್ಯಗಳೊಂದಿಗೆ ಪ್ರಾರಂಭವಾಯಿತು. ರಥದೊಂದಿಗೆ ಲಕ್ಷ್ಮೀದೇವಿ ಪಲ್ಲಕ್ಕಿಯೊಂದಿಗೆ ಕೆರೆಸಿದ್ದೇಶ್ವರ, ಹನಮಂತದೇವರು ಮತ್ತು ಅಮೋಘಸಿದ್ಧ ಪಾಲಕಿಗಳಿಗೆ ಭಕ್ತರು ಸೇವೆ ಮಾಡಿದರು.
ಭಕ್ತರು ‘ಜೈ ಲಕ್ಷ್ಮೀದೇವಿ’ ಎಂದು ಜೈಕಾರ ಹಾಕಿ ದೇವಿಗೆ ಭಂಡಾರ ಹಾರಿಸಿ ಆಡಿದ ಹೊನ್ನಾಟವು ಇಡೀ ಜಾತ್ರೆಗೆ ಕಳೆಕಟ್ಟಿತ್ತು. ಸೇರಿದ ಭಕ್ತರೆಲ್ಲ ಭಂಡಾರದಲ್ಲಿ ಮಿಂದೆದ್ದರು. ಭಂಡರಾದ ಓಕುಳಿಯಲ್ಲಿ ಇಡೀ ಗ್ರಾಮವು ಭಂಡಾರಮಯವಾಗಿತ್ತು. ದೇವಿಗೆ ಹೂವು, ಹಣ್ಣು, ಕಾಯಿ, ಬತ್ತಾಸು ಅರ್ಪಿಸಿದರು.
ಮಧ್ಯಾಹ್ನ ರಥವನ್ನು ಹುಣಸೆ ಬಣದ ಕೆರೆಸಿದ್ಧೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ದೇವಿಗೆ ಅಣ್ಣನಾಗಿರುವ ಕೆರೆಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ರಂಗೋಲಿ ಚಿತ್ತಾರದ ಅಲಂಕಾರದ ಮಧ್ಯದಲ್ಲಿ ದೇವಿಗೆ ಉಡಿ ತುಂಬಿದ ನಂತರ ದೇವಿ ರಥ ಮರಳಿ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು.
ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದ ಆರಂಭವಾದ ಅನ್ನಸಂತರ್ಪಣೆಯಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.