ADVERTISEMENT

ತಪಸಿ: ವಾಜಪೇಯಿ ವಸತಿ ಶಾಲೆ ನಿವೇಶನ ಸಮಸ್ಯೆ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 14:54 IST
Last Updated 27 ಅಕ್ಟೋಬರ್ 2020, 14:54 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಗೋಕಾಕ: ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿದೆ.

₹ 19.20 ಕೋಟಿ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಗ್ರಾಮದಲ್ಲಿ ಶಿಲಾನ್ಯಾಸ ಈಚೆಗೆ ನಡೆದಿತ್ತು. ಇದಕ್ಕೆ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು. ಅಲ್ಲಿ ಈಗಾಗಲೇ ಕೆಲ ಕುಟುಂಬಗಳು ಅನಧಿಕೃತವಾಗಿ ವಾಸಿಸುತ್ತಿರುವುದರಿಂದ ಅಲ್ಲಿ ಶಾಲೆ ನಿರ್ಮಾಣಕ್ಕೆ ಕೆಲವರಿಂದ ಅಪಸ್ವರಗಳು ಕೇಳಿಬಂದಿದ್ದವು. ಶಾಸಕರಿಗೂ ದೂರು ಬಂದಿದ್ದವು.

ಉಭಯ ಗುಂಪುಗಳ ಅನಿಸಿಕೆಗಳನ್ನು ಆಲಿಸಿದ ಬಾಲಚಂದ್ರ, ‘ಸರ್ವೆ ನಂ. 193ರಲ್ಲಿಯೇ 10 ಎಕರೆ ಜಾಗದಲ್ಲಿ ಶಾಲೆಯ ಹೊಸ ಕಟ್ಟಡ ನಿರ್ಮಿಸಲಾಗುವುದು. ಈ ಮೊದಲಿದ್ದ ನಿಯೋಜಿತ ಕಟ್ಟಡದ ಸ್ಥಳ ಬದಲಾಯಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ತಪಿಸ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ಶಾಲೆಯಿಂದ ಪ್ರಯೋಜನವಾಗಲಿದೆ. 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣದೊಂದಿಗೆ ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಅನುದಾನ ಬಿಡುಗಡೆಯಾಗಿದ್ದು, ನಿವೇಶನ ಸಮಸ್ಯೆ ಪರಿಹಾರ ಆಗಿರುವುದರಿಂದ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ, ಮುಖಂಡರಾದ ರಾಜೇಂದ್ರ ಸಣ್ಣಕ್ಕಿ, ಗುರಪ್ಪ ಹಿಟ್ಟಣಗಿ, ಬಾಳಪ್ಪ ನಾಯಿಕ, ಮುತ್ತೆಪ್ಪ ಮನ್ನಾಪೂರ, ರಾಯಪ್ಪ ತಿರಕನ್ನವರ, ವಸಂತ ಗಲಗಲಿ, ಲಕ್ಷ್ಮಣ ಅರಬನ್ನರ, ಯಮನಪ್ಪ ವಾಳದ, ಮಾರುತಿ ಸಾಯನ್ನವರ, ಗುರುನಾಥ ಪೊಲೀಸನವರ, ಲಕ್ಕಪ್ಪ ಕುರೇರ, ಸಿದ್ದಪ್ಪ ಸುಳ್ಳನವರ, ಗುರುನಾಥ ಕುರೇರ, ಶಿವಪುತ್ರ ದಾಬೋಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.