ADVERTISEMENT

ಜಮೀನು ಕಬಳಿಕೆ: ಹುಕ್ಕೇರಿ ಉ‍‍‍‍‍ಪ ನೋಂದಣಾಧಿಕಾರಿ ಮಡಿವಾಳಯ್ಯ ಸೇರಿ 9 ಜನ ಬಂಧನ

ನಕಲಿ ದಾಖಲೆ ಸೃಷ್ಟಿಸಿ ₹ 2 ಕೋಟಿಗೂ ಅಧಿಕ ಮೌಲ್ಯದ ಜಮೀನು ಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 3:11 IST
Last Updated 13 ಫೆಬ್ರುವರಿ 2026, 3:11 IST
<div class="paragraphs"><p>ಮಡಿವಾಳಯ್ಯ ಬಸವರಾಜ ಬಾನಿಮಠ</p></div>

ಮಡಿವಾಳಯ್ಯ ಬಸವರಾಜ ಬಾನಿಮಠ

   

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿನ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ, ₹2 ಕೋಟಿಗೂ ಅಧಿಕ ಮೌಲ್ಯದ ಜಮೀನು ಕಬಳಿಸಿದ ಆರೋಪದ ಮೇಲೆ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿವಾಳಯ್ಯ ಬಸವರಾಜ ಬಾನಿಮಠ, ಸಿಬ್ಬಂದಿ ಆನಂದ ಎಂ. ದಡ್ಡಿಮನಿ ಸದ್ಯ ಜಾಮೀನು ಪಡೆದಿದ್ದಾರೆ.  ಕುರಣಿ  ಗ್ರಾಮದ ರೇಣುಕಾ ಶಂಕರ ಮಾಳಿ, ಶಿವರುದ್ರ ಪ್ರಧಾನಿ ಕುದ್ನೂರಿ, ಕಾಶವ್ವ ಶಿವರುದ್ರ ಕುದ್ನೂರಿ, ನೀಲಕಂಠ ಶೆಟ್ಟೆಪ್ಪ ಮುದುಪಾಕಿ, ಸಿದ್ದಯ್ಯ ನಿರುಪಾದಯ್ಯ ಹಿರೇಮಠ, ವಿಜಯ ಶಿವಶಂಕರ ಮಠದ, ಅಶೋಕ ಸೂರ್ಯವಂಶಿ ಬಂಧಿತರು. ಇನ್ನೊಬ್ಬ ಆರೋಪಿ ಅಡಿವೆಪ್ಪ ಶೆಟ್ಟೆಪ್ಪ ಮುದುಪಾಕಿ ನಿಧನರಾಗಿದ್ದಾರೆ.

ADVERTISEMENT

‘ಕುರಣಿ ಗ್ರಾಮದ ಶಿವಾನಂದ ಮಾರುತಿ ಕುದ್ನೂರಿ ಅವರು ದೂರು ನೀಡಿದ ಬಳಿಕ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.  

‘2025ರ ಮೇ ತಿಂಗಳಲ್ಲಿ ಎಲ್ಲರೂ ಸೇರಿ ನಕಲಿ ಆಧಾರ್‌ ಕಾರ್ಡ್‌, ನಕಲು ಪಾನ್‌ಕಾರ್ಡ್‌ ಹಾಗೂ ಜಮೀನು ದಾಖಲೆಗಳನ್ನು ಸೃಷ್ಟಿಸಿದ್ದರು. ಕೊಳ್ಳುವವರು ಹಾಗೂ ಮಾರುವವರು ತಾವೇ ಎಂದು ಹೇಳಿ ಹುಕ್ಕೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವ್ಯವಹಾರ ಕುದುರಿಸಿದ್ದರು' ಎಂದು ತಿಳಿಸಿದರು.

‘ಜಮೀನಿನ ಮಾಲೀಕರ ಹೆಸರಲ್ಲಿ ನಕಲಿ ಆಧಾರ್‌ ಕಾರ್ಡ್ ಹಾಗೂ ಮತದಾರರ ಕಾರ್ಡ್‌ ಮಾಡಿ, ಅವರ ಭಾವಚಿತ್ರದ ಜಾಗದಲ್ಲಿ ಆರೋಪಿಯೊಬ್ಬನ ಭಾವಚಿತ್ರ ಅಂಟಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, 9 ನಕಲಿ ಆಧಾರ್ ಕಾರ್ಡ್‌,3 ನಕಲಿ ಪಾನ್‌ಕಾರ್ಡ್‌, 1 ನಕಲಿ ಮತದಾರರ ಗುರುತಿನ ಚೀಟಿ ಕೂಡ ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ದಾಖಲೆಗಳು ಅಶೋಕ ಸೂರ್ಯವಂಶಿ ಎಂಬುವವರ ಫೋಟೊ ಸ್ಟುಡಿಯೊದಲ್ಲಿ ಪತ್ತೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.