ADVERTISEMENT

ಬೆಳಗಾವಿ: ಕೂಲಿ ಕಾರ್ಮಿಕರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜನ್ಮದಿನಾಚರಣೆ

ಶ್ರಮಿಕರ ಕಷ್ಟ ಆಲಿಸಿದ ಶಾಸಕಿ ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 12 ಮೇ 2020, 10:18 IST
Last Updated 12 ಮೇ 2020, 10:18 IST
ಬೆಳಗಾವಿ ತಾಲ್ಲೂಕಿನ ಮೋದಗಾ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಕೂಲಿ ಕಾರ್ಮಿಕರಿಗೆ ಉಪಾಹಾರ ನೀಡಿದರು
ಬೆಳಗಾವಿ ತಾಲ್ಲೂಕಿನ ಮೋದಗಾ ಗ್ರಾಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಕೂಲಿ ಕಾರ್ಮಿಕರಿಗೆ ಉಪಾಹಾರ ನೀಡಿದರು   

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಅವರು ಮಂಗಳವಾರ ತಮ್ಮ ಜನ್ಮದಿನವನ್ನು (ವಿಧಾನಸಭೆಗೆ ಆಯ್ಕೆಯಾದ ದಿನ) ವಿಶಿಷ್ಟವಾಗಿ ಆಚರಿಸಿಕೊಂಡರು.

ತಾಲ್ಲೂಕಿನ ಮೋದಗಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು. ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸಿ ಅವರೊಂದಿಗೆ ಸಮಯ ಕಳೆದರು.

‘ದುಡಿಯುವ ವರ್ಗವೆಂದರ ನನ್ನ ಹೃದಯಕ್ಕೆ ಹತ್ತಿರ. ಅವರನ್ನು ಕಂಡನೆ ಎಲ್ಲಿಲ್ಲದ ಅಕ್ಕರೆ, ಅನುಕಂಪ. ಅವರ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರ ಕೆಲಸದ ಸಮಯದಲ್ಲಿ ವಿನಾಯಿತಿ ನೀಡಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಕೂಲಿಕಾರ್ಮಿಕರಿಗೆ ಕೊರೊನಾ ಅಟ್ಟಹಾಸದಿಂದ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಿದೆ. ಅವರ ಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇವತ್ತಿನ ದುಡಿಮೆ ಇವತ್ತಿನ ಊಟ ಎನ್ನುವಂತಹ ಪರಿಸ್ಥಿತಿ ಅವರದು. ಅವರ ದುಡಿಮೆಯೇ ಕುಟುಂಬಕ್ಕೆ ಆಧಾರ. ಈ ಎಲ್ಲ ಅಕ್ಕ ತಂಗಿಯರ ಜೊತೆ ಬೆರೆತು ಕಷ್ಟ–ಸುಖ ಹಂಚಿಕೊಳ್ಳುವುದರೊಂದಿಗೆ ಹುಟ್ಟುಹಬ್ಬದ ಆಚರಣೆಯೂ ಹಂಚಿಕೊಂಡಿದ್ದೇನೆ. ಕ್ಷೇತ್ರದಲ್ಲಿ ದುಡಿಯುತ್ತಿರುವ ಅವರಿಗೆ ಏನಾದರೂ ತೊಂದರೆ ಇದೆಯೇ ಎಂದು ವಿಚಾರಿಸಿದ್ದೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.‌

ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ, ಯುವರಾಜ ಕದಂ ಇದ್ದರು.

ಫಲಾನುಭವಿಗಳಿಗೆ ಚೆಕ್ ವಿತರಣೆ:ಕ್ಷೇತ್ರದ ಮಂದಿಗೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‌ಗಳನ್ನು ಶಾಸಕಿ ಲಕ್ಷ್ಮಿ ವಿತರಿಸಿದರು.

ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಚೆಕ್‌ಗಳನ್ನು ಹಸ್ತಾಂತರಿಸಿದರು. ‘ಕ್ಷೇತ್ರದಲ್ಲಿ ಯಾರೇ ಸಂಕಷ್ದಲ್ಲಿದ್ದರೂ ಅವರಿಗೆ ನೀಡುತ್ತಾ ಬಂದಿದ್ದೇನೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೂರಾರು ಜನರಿಗೆ ಸೌಲಭ್ಯ ಒದಗಿಸಿದ್ದೇನೆ. ಕೆಲವರಿಗೆ ಕೇವಲ ಮೂರು ಗಂಟೆಯಲ್ಲಿ ಹಣ ಮಂಜೂರು ಮಾಡಿಸಿದ್ದೇನೆ. ವೈಯಕ್ತಿಕವಾಗಿಯೂ ನೆರವು ನೀಡಿದ್ದೇನೆ. ಇದರಲ್ಲಿ ಜಾತಿ, ಪಕ್ಷ ಯಾವುದನ್ನೂ ನೋಡುವುದಿಲ್ಲ’ ಎಂದರು.

‘ಕ್ಷೇತ್ರ ನನಗೆ ಕುಟುಂಬವಿದ್ದಂತೆ. ಎಲ್ಲರ ಮನೆಮಗಳಾಗಿ ಕೆಲಸ ಮಾಡುತ್ತಿದ್ದೇನೆ. ವಿಶ್ವಾಸ ಇಟ್ಟೊದ್ದಕ್ಕೆ ನಾನು ಎಲ್ಲರಿಗೂ ಚಿರ ಋುಣಿಯಾಗಿದ್ದೇನೆ’ ಎಂದು ಭಾವುಕರಾಗಿ ಹೇಳಿದರು.

ಗೌರವ್ವ ಬಂಬರಗಿ, ಮಂಗಲಾ ಅಂಡೋಚೆ, ವಿರೂಪಾಕ್ಷಿ ಹೊಸಮನಿ, ನೀಲಕಂಠ ಬಾ. ಪತ್ತಾರ, ಸಂತೋಷ ಬಾ. ತೊಲಗಿ, ಶಿವಾಜಿ ಬಾ. ಲಖನಗೌಡ, ಶಾಂತಾ ಸು. ಲಕಮನ್ನವರ, ಅಶೋಕ ಶಿ. ಕಾಂಬಳೆ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.