ADVERTISEMENT

ಗ್ರಾಮಗಳ ಸ್ಥಳಾಂತರ, ನೇಕಾರರಿಗೆ ಪರಿಹಾರಕ್ಕೆ ಆಗ್ರಹ

ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 11:14 IST
Last Updated 25 ಆಗಸ್ಟ್ 2020, 11:14 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಳಗಾವಿ: ‘ಜಿಲ್ಲೆಯ ಪ್ರವಾಹಪೀಡಿತ 50ಕ್ಕೂ ಹೆಚ್ಚಿನ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಹೋದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ವಿದ್ಯುತ್ ಮಗ್ಗಗಳಿಗೆ ತಲಾ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.

‘ಕಳೆದ ವರ್ಷ ನೆರೆಯಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಾನಿಗೆ ಒಳಗಾದ 10 ಸಾವಿರ ವಿದ್ಯುತ್ ಮಗ್ಗಗಳಿಗೆ ತಲಾ ₹25 ಸಾವಿರ ಪರಿಹಾರ ನೀಡಲು 2019ರ ಅ.3ರಂದು ಬೆಳಗಾವಿಯಲ್ಲಿ ಹಾಗೂ ಅ.4ರಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಅ.18ರಂದು ಅಧಿಕೃತ ಆದೇಶ ಹೊರಡಿಸಿತ್ತು. ಆದರೆ, ಅ.24ರಂದು ಕಂದಾಯ ಇಲಾಖೆಯಿಂದ ತಿದ್ದುಪಡಿ ಆದೇಶ ಹೊರಡಿಸಿ ತಲಾ ಮಗ್ಗದ ಬದಲಿಗೆ ತಲಾ ಕುಟುಂಬಕ್ಕೆ ಎಂದು ತಿಳಿಸಲಾಯಿತು. 2 ಮಗ್ಗಗಳು ಹಾನಿ ಆದವರಿಗೂ ₹ 25ಸಾವಿರ, 20 ಮಗ್ಗಗಳು ಹಾನಿಗೊಳಗಾದವರಿಗೂ ₹ 25ಸಾವಿರ ಪರಿಹಾರ ಕೊಡಲಾಯಿತು. ಇದು ಯಾವ ನ್ಯಾಯ?’ ಎಂದು ಕೇಳಿದರು.

‘ಮುಖ್ಯಮಂತ್ರಿ ನಡೆಸಿದ ಸಭೆಗಳಲ್ಲಿ ಕೈಗೊಂಡ ನಿರ್ಧಾರದಂತೆಯೇ ಪ್ರತಿ ಮಗ್ಗಕ್ಕೆ ₹ 25ಸಾವಿರ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನೇಕಾರರು ಈ ವರ್ಷ ಕೊರೊನಾ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರು ಸಿದ್ಧಪಡಿಸಿದ 50 ಲಕ್ಷ ಸೀರೆಗಳನ್ನು ಸರ್ಕಾರವೇ ನೇರವಾಗಿ ಖರೀದಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ವೀರೇಂದ್ರ ಗೋಬರಿ, ಜೈನುಲ್ಲಾ ಜಮಾದಾರ, ರಾಕೇಶ ಸಂಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.